ಜಿಲ್ಲೆ

ದಿಂಗಾಲೇಶ್ವರರೇ ಉತ್ತರಾಧಿಕಾರಿ ಆಗಲಿ

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠಕ್ಕೆ, ಈ ಹಿಂದಿನ ಒಪ್ಪಂದದಂತೆ ಮತ್ತು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳೇ ಅಪೇಕ್ಷಿಸಿದಂತೆ ಬಾಲೇಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮಿಗಳನ್ನೇ ಉತ್ತರಾಧಿಕಾರಿಯಾಗಿ ನೇಮಿಸಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.23ರಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಮೂರುಸಾವಿರ ಮಠಕ್ಕೆ ಬರುವುದಾಗಿ ತಿಳಿಸಿದ್ದಾರೆ. ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (ಮೂಜಗು) ಅವರು ದಿಂಗಾಲೇಶ್ವರ ಸ್ವಾಮಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸಿ, ಉತ್ತರಾಧಿಕಾರಿ ವಿವಾದಕ್ಕೆ ರ್ತಾಕ ಅಂತ್ಯ ಹಾಡಲಿ. ಮಠದ ಹಿಂದಿನ ವೈಭವ ಮರುಕಳಿಸುವಂತಾಗಲಿ ಎಂದರು.

ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಇತ್ತೀಚೆಗೆ ತಮ್ಮ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಜನತೆಗೆ ಸ್ಪಷ್ಟನೆ ನೀಡುತ್ತಿರುವುದಾಗಿ ತಿಳಿಸಿದ ಸಂಕೇಶ್ವರ ಅವರು, ಮಠದ ಭಕ್ತ ಹಾಗೂ ಉನ್ನತಾಧಿಕಾರ ಸಮಿತಿಯ ಹಿಂದಿನ ಸದಸ್ಯರಾಗಿ, ಹಿಂದಿನ ಎಲ್ಲ ವಿದ್ಯಮಾನಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. 2014ರಲ್ಲಿ ಮೂಜಗು ಅವರೇ ಅನಾರೋಗ್ಯ ಕಾರಣದಿಂದ ತಮಗೆ ಒಬ್ಬರು ಸಹಾಯಕ್ಕೆ ಬೇಕೆಂಬ ಪ್ರಸ್ತಾಪ ಇಟ್ಟಿದ್ದರು. ನಂತರ ಶ್ರೀ ದಿಂಗಾಲೇಶ್ವರ ಸ್ವಾಮಿಗಳನ್ನು ಆಹ್ವಾನಿಸಿ ಪ್ರಮುಖರ ಮನೆಗೆ ಕರೆದೊಯ್ದು ಉತ್ತರಾಧಿಕಾರಿಯಾಗಿ ಮಾಡುವಂತೆ ಕೋರಿದ್ದರು. ‘ಉತ್ತರಾಧಿಕಾರಿ ನೋಂದಣಿ’ ವೇಳೆಗೆ ಮೂಜಗು ಮಠದಿಂದ ಬೇರೆ ಕಡೆಗೆ ತೆರಳಿದ್ದರು. ಅಲ್ಲಿಗೆ ಉತ್ತರಾಧಿಕಾರಿ ವಿಷಯ ಸ್ಥಗಿತಗೊಂಡಿತ್ತು ಎಂದು ಹೇಳಿ, ನೇಮಣೂಕಿ ಪತ್ರದ ದಾಖಲೆಯನ್ನು ಬಿಡುಗಡೆ ಮಾಡಿದರು.

ದಿಂಗಾಲೇಶ್ವರ ಸ್ವಾಮೀಜಿ ಚಿಕ್ಕ ಹಳ್ಳಿಯಲ್ಲಿ ಅದ್ಭುತವಾದ ಮಠ ಕಟ್ಟಿ, ತಾವು ಸಮರ್ಥರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ತಿಂಗಳ ಪರ್ಯಂತ ಪ್ರವಚನ ಮಾಡಿದಾಗ ಅದ್ಭುತ ಪ್ರತಿಕ್ರಿಯೆ ಬಂದಿತ್ತು. ಬಾಬಾ ರಾಮದೇವ ಕೂಡ ಅವರನ್ನು ಪ್ರಶಂಸಿಸಿದ್ದರು. ಹಿಂದೆ ಶ್ರೀ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಜಗದ್ಗುರುಗಳಾಗಿದ್ದಾಗ ಮಠ ದೊಡ್ಡ ಚಟುವಟಿಕೆಯ ಕೇಂದ್ರವಾಗಿತ್ತು. ಈಗ ಹಾಗೆ ಇಲ್ಲ. 1400-1500 ವರ್ಷದ ಇತಿಹಾಸ ಇರುವ ಮಠ ಮತ್ತೆ ಆಧ್ಯಾತ್ಮಿಕ, ಸಾಮಾಜಿಕ ಚಟುವಟಿಕೆಗಳ ಕೇಂದ್ರ ವಾಗಬೇಕು ಎನ್ನುವುದು ಎಲ್ಲರ ಆಶಯ. ಆದ್ದರಿಂದ, ಸಮರ್ಥರಾದ ದಿಂಗಾಲೇಶ್ವರ ಸ್ವಾಮಿಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಲಿ. ಇಬ್ಬರೂ ಗುರುಗಳು ಸೇರಿ ಮಠದ ಚಟುವಟಿಕೆ ನಡೆಸಿಕೊಂಡು ಹೋಗುವಂತಾಗಬೇಕು ಎಂದರು.

2014ರಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಅವರನ್ನೇ ಉತ್ತರಾಧಿಕಾರಿ ಮಾಡಬೇಕೆಂದು ಮೂಜಗು ಪ್ರಸ್ತಾಪ ಇಟ್ಟಾಗ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಮೂಜಗು ಅವರೇ ಈಗಿನ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಎಂಎಲ್​ಸಿ ಬಸವರಾಜ ಹೊರಟ್ಟಿ ಸೇರಿ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಮನೆಗೆ ದಿಂಗಾಲೇಶ್ವರರನ್ನು ಸ್ವತಃ ಕರೆದುಕೊಂಡು ಹೋಗಿದ್ದರು. ನಮ್ಮ ಮನೆಗೂ ಕರೆತಂದಿದ್ದರು. ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸೇರಿ ಒಟ್ಟು 9 ಸ್ವಾಮೀಜಿಗಳು, ಸಮಾಜದ ಇತರ ಮುಖಂಡರು ಸೇರಿ 52 ಜನರು ದಿಂಗಾಲೇಶ್ವರರನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಪತ್ರಕ್ಕೆ ಸಹಿ ಹಾಕಿದ್ದೆವು. ಪತ್ರದ ನೋಂದಣಿಗೆ ದಿನ ನಿಗದಿಯಾಗಿತ್ತು. ಆದರೆ, ಮೂಜಗು ರಾತ್ರೋರಾತ್ರಿ ಮಠದಿಂದ ಕಾಣೆಯಾಗಿದ್ದರು. ಅವರು ರುದ್ರಮುನಿ ಜತೆ ಇದ್ದಾರೆಂದು ಮಾಹಿತಿ ಸಂಜೆ ವೇಳೆಗೆ ದೊರೆಯಿತು. ತಲೆಬಿಸಿಯಾಗಿ ಅಲ್ಲಿಗೆ ಹೋಗಿದ್ದಾರೆ. 3-4 ದಿನದಲ್ಲಿ ಬರುತ್ತಾರೆಂದು ಹೇಳಲಾಗಿತ್ತಷ್ಟೇ. ಈ ವಿದ್ಯಮಾನದ ನಂತರವೇ ದಿಂಗಾಲೇಶ್ವರ ಸ್ವಾಮೀಜಿ ಮೇಲೆ 8-10 ಕ್ರಿಮಿನಲ್ ಪ್ರಕರಣಗಳು ದಾಖಲಾದವು. ಇದೊಂದು ಷಡ್ಯಂತ್ರ, ದುರುದ್ದೇಶಪೂರ್ವಕ ಎಂದು ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು. ಈಗ ಎಲ್ಲ ಪ್ರಮುಖ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿವೆ. ಹಾಗಾಗಿ ಮೂಜಗು ಮತ್ತು ಮುಖಂಡರಿಗೆ ಅವರನ್ನು ಈಗ ಉತ್ತರಾಧಿಕಾರಿ ಮಾಡಲು ಸಮಸ್ಯೆ ಇಲ್ಲ. ಮೂರುಸಾವಿರ ಮಠ ಮತ್ತೊಮ್ಮೆ ಧಾರ್ವಿುಕ-ಸಾಮಾಜಿಕ ಚಟುವಟಿಕೆಗಳ ಮತ್ತು ವೀರಶೈವ ಸಮುದಾಯದ ಶಕ್ತಿ ಕೇಂದ್ರದ ಪಾತ್ರ ವಹಿಸಲಿ ಎಂಬ ಸಮುದಾಯದ ಕನಸು ನನಸಾಗಲಿ ಎಂದರು.

ಮೂಜಗು ಅವರು ಮಠ ನಡೆಸಲು ಸಮರ್ಥರಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆಂಬ ಕುರಿತು ಗಮನ ಸೆಳೆದಾಗ, ‘ಆರೋಗ್ಯ ಸರಿ ಇಲ್ಲ’ ಎಂದು ಅವರೇ ಅಫಿಡವಿಟ್​ನಲ್ಲಿ ಹೇಳಿದ್ದಾರೆ. ವ್ಯಾಮೋಹಕ್ಕೊಳಗಾಗಿ ಉಳಿದುಕೊಂಡಿದ್ದಾರೆ. ಮಠ ಅಧೋಗತಿಗೆ ಬಂದಿದೆ ಎಂದು ಡಾ.ಸಂಕೇಶ್ವರ ಅವರು ಪ್ರತಿಕ್ರಿಯಿಸಿದರು. ಕೊಪ್ಪಳ ಗವಿ ಮಠ, ಬೆಳಗಾವಿ ಜಿಲ್ಲೆ ಯಡೂರು ಮಠ ಸೇರಿ ಬೇರೆ ಮಠಗಳಿಗೆ ಹೋಲಿಸಿದಾಗ ಮೂರುಸಾವಿರ ಮಠದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಉನ್ನತಾಧಿಕಾರ ಸಮಿತಿ ಸಭೆ ಕಾಲಕಾಲಕ್ಕೆ ನಡೆಯುತ್ತಿಲ್ಲ. ತಾವು ಉನ್ನತಾಧಿಕಾರ ಸಮಿತಿಗೆ ರಾಜೀನಾಮೆ ನೀಡಿದ್ದು, 6 ವರ್ಷದಿಂದ ಮಠಕ್ಕೂ ಹೋಗಿಲ್ಲ ಎಂದರು. ದಿಂಗಾಲೇಶ್ವರ ಸ್ವಾಮಿಗಳೇ ಉತ್ತರಾಧಿಕಾರಿಯಾಗಬೇಕೆ? ಎಂದು ಕೇಳಿದಾಗ, ಒಪ್ಪಂದದಂತೆ ನಡೆಯಲಿ, ಅವರು ಸಮರ್ಥರಿದ್ದಾರೆ ಎಂದು ಸಕಾರಾತ್ಮಕವಾಗಿ ಉತ್ತರಿಸಿದರು. ದಿಂಗಾಲೇಶ್ವರರು 4 ದಿನದ ಹಿಂದೆ ಭೇಟಿಯಾದಾಗ, ನೀವು ಬಂದರೆ ಹೂಮಾಲೆ ಹಾಕಿ ಸ್ವಾಗತಿಸುತ್ತೇನೆಂದು ಮೂಜಗು ಹೇಳಿದ್ದಾರಂತೆ. ಇದು ದಿಂಗಾಲೇಶ್ವರರಿಂದಲೇ ತಮಗೆ ತಿಳಿದಿದೆ. ಆದ್ದರಿಂದ ಹೂಮಾಲೆ ಹಾಕಿ ಸ್ವಾಗತಿಸಲಿ ಎಂದರು.

ಆರ್ಥಿಕ ತೊಂದರೆ, ಸಹಾಯ

ಈ ಹಿಂದೆ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಭುಗಿಲೆದ್ದಿದ್ದಾಗ, ರುದ್ರಮುನಿ ಸ್ವಾಮೀಜಿ ಅವರಿಗೆ ಕೋಟಿ ರೂ. ಕೊಡಬೇಕಿತ್ತಂತೆ. ಅದಕ್ಕಾಗಿ ದಿಂಗಾಲೇಶ್ವರ ಸ್ವಾಮೀಜಿ ಕೋಟಿ ರೂ. ಹೊಂದಿಸಿ ಮೂಜಗು ಅವರಿಗೆ ನೀಡಿದ್ದರು. ಮುಂದೆ ಮೂಜಗು ಅವರಿಗೆ ಹಣಕಾಸಿನ ತೊಂದರೆಯಾಯಿತು. ನಾವೆಲ್ಲ ಸಭೆ ಕರೆದು, ಕೈಗಡವಾಗಿ ಅವರು ಪಡೆದಿದ್ದ ಮೊತ್ತಕ್ಕೆ ಸಂಬಂಧಿಸಿದ ಪ್ರಕರಣ ಬಗೆಹರಿಸಿದ್ದೆವು ಎಂದು ಡಾ.ವಿಜಯ ಸಂಕೇಶ್ವರ ನೆನಪಿಸಿಕೊಂಡರು. ಮತ್ತೊಮ್ಮೆ ಮೂಜಗು ಅವರು ಮೂರುಸಾವಿರ ಮಠದ ಲಕ್ಷ್ಮೀ ಕಂಬದ ದುರಸ್ತಿಗಾಗಿ 2 ಲಕ್ಷ ರೂ. ಕೇಳಿದ್ದರು. ಎರಡು ವರ್ಷದಿಂದ ಆ ಕಂಬ ನಿರ್ವಿುಸಲಾಗದೆ ದಯನೀಯ ಸ್ಥಿತಿಯಲ್ಲಿದ್ದೇವೆಂದು ಸ್ವಾಮಿಗಳು ಕೋರಿಕೊಂಡ ಹಿನ್ನೆಲೆಯಲ್ಲಿ ನಾನು 2.50 ಲಕ್ಷ ರೂ. ಚೆಕ್ ನೀಡಿದ್ದೆ. ಆಗಾಗ ಹಣಕಾಸು ನೆರವು ನೀಡಿದ್ದೇನೆ. ಮಠದ ಭಕ್ತನಾಗಿ ಒಳ್ಳೆಯ ಕೆಲಸ ಬೆಂಬಲಿಸಿದ್ದೇನೆ ಎಂದರು.

ಹಲವು ಆಸ್ತಿ ಮಾರಾಟ

ಈ ಹಿಂದಿನ ಜಗದ್ಗುರು ಗಂಗಾಧರ ಸ್ವಾಮೀಜಿ ಅವರಂತೆ ಈಗಿನ ಸ್ವಾಮೀಜಿ ಕ್ರಿಯಾಶೀಲರಾಗಿಲ್ಲ. ಮಠದಲ್ಲಿ ಕ್ರಿಯಾತ್ಮಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಠ ಆರ್ಥಿಕವಾಗಿಯೂ ಮೊದಲಿನಷ್ಟು ಸಬಲವಾಗಿಲ್ಲ ಎಂದು ಡಾ.ವಿಜಯ ಸಂಕೇಶ್ವರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣ ಕೋಲ್ಕತ್ತಾ ಆರ್ಬಿಟ್ರೇಶನ್​ಗೆ ಹೋದಾಗ ಪೀಠಾಧಿಪತಿಗಳು ಮೂರುಸಾವಿರ ಮಠದ ಯಾವುದೇ ಆಸ್ತಿ ಮಾರಾಟ ಮಾಡಕೂಡದು ಮತ್ತು ತಮ್ಮ ಹೆಸರಿಗೆ ಮಾಡಿಕೊಳ್ಳಬಾರದು ಎಂಬ ವಿಷಯವನ್ನು ದಿಂಗಾಲೇಶ್ವರರೇ ಜಗದೀಶ ಶೆಟ್ಟರ್ ಅವರ ರಚನಾತ್ಮಕ ಸಲಹೆ ಮೇರೆಗೆ ಸೇರ್ಪಡೆ ಮಾಡಿದ್ದರು. ಆದಾಗ್ಯೂ ಮೂಜಗು ಮಠಕ್ಕೆ ಸಂಬಂಧಿಸಿದ ಹಲವಾರು ಆಸ್ತಿ ಮಾರಾಟ ಮಾಡಿದ್ದಾರೆ. ಗದಗಿಮಠ ಎಂಬುವವರಿಗೆ 3 ಎಕರೆ, ಆರ್.ಟಿ.ಮಜ್ಜಗಿ ಅಳಿಯನಿಗೆ 2 ಎಕರೆ ಜಾಗ ಮಾರಾಟ ಮಾಡಿದ್ದಲ್ಲದೆ, ಹಾನಗಲ್ ಮಠಕ್ಕೆ ಸಂಬಂಧಿಸಿದ ಇಲ್ಲಿಯ ಸೊರಬದಮಠ ಗಲ್ಲಿಯ ಹಲವಾರು ಆಸ್ತಿಯನ್ನೂ ಮಾರಾಟ ಮಾಡಿದ್ದಾರೆ ಎಂದು ಗೊತ್ತಾಗಿದೆ ಎಂದು ತಿಳಿಸಿದರು.

ಅಫಿಡವಿಟ್​ನಲ್ಲಿ ಏನಿದೆ?

ಮೂಜಗು ಸಹಿ ಹಾಕಿರುವ ಉತ್ತರಾಧಿಕಾರಿ ನೇಮಣೂಕಿ ಪತ್ರದಲ್ಲಿ, ತಮ್ಮ ಮನಸ್ಸು ಸಂಪೂರ್ಣವಾಗಿ ಲಿಂಗಪೂಜೆ, ಯೋಗ ಸಾಧನೆಯತ್ತ ವಾಲಿರುವುದರಿಂದ ಏಕಾಂತದ ಅವಶ್ಯಕತೆ ಇದೆ. ಆರೋಗ್ಯ ಸಮಸ್ಯೆಯೂ ಇದೆ. ಮಹಾಪೀಠದ ಕಾರ್ಯ ಮತ್ತು ಸಮಾಜ ಕಾರ್ಯ ನಿರ್ವಹಿಸುವುದು ಕಠಿಣವಾಗಿದೆ. ಇದನ್ನೆಲ್ಲ ಮನಗಂಡು, ಸರಿಯಾದ ಚಿತ್ತಶುದ್ಧಿ ಇದ್ದಾಗಲೇ ಪೀಠದ ಸಾಂಪ್ರದಾಯಿಕ ಪದ್ಧತಿಯಂತೆ ಉತ್ತರಾಧಿಕಾರಿ ಆಯ್ಕೆಗಾಗಿ ಮಠದಿಂದ ಪ್ರಕಟಣೆ ಹೊರಡಿಸಿದ್ದು, 1.10.2014ರಂದು ಹುಬ್ಬಳ್ಳಿ-ಧಾರವಾಡದ ಯಾವತ್ತೂ ಭಕ್ತರು ಪಾಲ್ಗೊಂಡ ಸಭೆಯಲ್ಲಿ , ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮಿಗಳನ್ನು ಅವರ ಸಾಮರ್ಥ್ಯದ ಆಧಾರದಲ್ಲಿ ಉತ್ತರಾಧಿಕಾರಿಯಾಗಿ ನೇಮಿಸಲು ಸರ್ವಾನುಮತದಿಂದ ಸಮ್ಮತಿ ಸಿಕ್ಕಿದೆ. ಆ ಪ್ರಕಾರ, ಕಾನೂನುಬದ್ಧ ನೇಮಣೂಕಿಗಾಗಿ ಪತ್ರ ಬರೆದುಕೊಡಲಾಗಿದೆ. ಶೀಘ್ರದಲ್ಲೇ ಆಶ್ರಮ ಸಂಸ್ಕಾರ ನೀಡಿ, ಶ್ರೀ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳೆಂದು ನೂತನ ಅಭಿದಾನದಿಂದ ಪೀಠಾಧಿಕಾರಿಯನ್ನಾಗಿ ಮಾಡುತ್ತೇವೆ. ದಿಂಗಾಲೇಶ್ವರರಿಗೆ ಈಗಾಗಲೇ ಧಾರ್ವಿುಕ ಸಂಸ್ಕಾರಗಳೆಲ್ಲವೂ ಆಗಿವೆ. ಶೂನ್ಯ ಸಿಂಹಾಸನಾರೋಹಣ ಮತ್ತು ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸುವುದು ಮಾತ್ರ ಬಾಕಿ ಉಳಿದಿದೆ. ಈ ಉತ್ತರಾಧಿಕಾರಿ ನೇಮಕಾತಿ ಯೋಗದಿಂದ ಹುಬ್ಬಳ್ಳಿ ಮೂರುಸಾವಿರ ಮಠಕ್ಕೆ ಇನ್ನುಮುಂದೆ ನೀವೇ ನಮ್ಮ ಉತ್ತರಾಧಿಕಾರಿಗಳಾಗುವಿರಿ... ಸಂಪೂರ್ಣ ಅಧಿಕಾರವನ್ನು ಈ ಲೇಖಿಯಿಂದ ನಿಮಗೆ ಕೊಟ್ಟಿರುತ್ತೇವೆ... ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಲು ಅಪ್ಪಣೆ ಆಶೀರ್ವಾದ ಮಾಡಿರುತ್ತೇವೆ. ಹೀಗೆ ಬರೆದು ಮೂಜಗು ಅವರು ಸಹಿ ಹಾಕಿದ್ದಾರೆ. ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನವಲಗುಂದ ಗವಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮಂಟೂರಿನ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಮುಳ್ಳಳ್ಳಿಯ ಶ್ರೀ ಶಿವಯೋಗೀಶ್ವರ ಸ್ವಾಮಿಗಳು, ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರಾಯನಾಳ ವಿರಕ್ತ ಮಠದ ಶ್ರೀ ಮಹಾಂತ ಸ್ವಾಮಿಗಳು, ಬಿಜಕಲ್ ವಿರಕ್ತ ಮಠದ ಶ್ರೀ ಶಿವಲಿಂಗ ಸ್ವಾಮಿಗಳು; ವೀರಣ್ಣ ಮತ್ತಿಕಟ್ಟಿ, ಶಂಕರಣ್ಣ ಮುನವಳ್ಳಿ, ಜಗದೀಶ ಶೆಟ್ಟರ್, ವಿಜಯ ಸಂಕೇಶ್ವರ, ಬಸವರಾಜ ಹೊರಟ್ಟಿ, ಬಸವರಾಜ ಬೊಮ್ಮಾಯಿ, ಪ್ರಭಾಕರ ಕೋರೆ ಸೇರಿ ಒಟ್ಟು 52 ಜನರ ಸಹಿ ಇದೆ.