ಆಲೂರು: ಅಭಿವೃದ್ಧಿ ಎಂಬುದು ಸದಾ ಕಾರ್ಯರೂಪದಲ್ಲಿದ್ದಾಗ ಮಾತ್ರ ಪ್ರತಿ ಹಳ್ಳಿ ಪ್ರಗತಿಯತ್ತ ಹೆಜ್ಜೆ ಇಡಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಗ್ರಾಮದ ಅಭಿವೃದ್ಧಿ ಆಯಾ ಕ್ಷೇತ್ರದ ಕ್ರಿಯಾಶೀಲ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಒಬ್ಬ ಜನಪ್ರತಿನಿಧಿಯಾದವನು ಯಾವುದೇ ಭೇದಭಾವವಿಲ್ಲದೆ ನ್ಯಾಯಸಮ್ಮತ ಹಾಗೂ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಜನರು ಸದಾ ಸ್ಮರಿಸುತ್ತಾರೆ ಎಂದರು.
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ಗ್ರಾಮದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಪಾಲಿಸಿದಾಗ ಮಾದರಿ ಗ್ರಾಮವಾಗಿ ಮೂಡಿ ಬರಲು ಸಾಧ್ಯವಿದೆ. ನಮ್ಮ ಊರು ಮಾದರಿ ಊರು ಆಗಬೇಕು. ಇಲ್ಲಿನ ವ್ಯವಸ್ಥೆ ಕೂಡ ಮಾದರಿಯಾಗಬೇಕು ಎನ್ನುವ ನೆಲೆಯಲ್ಲಿ ಇಲ್ಲಿನ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜನರು ಮಾಡುತ್ತಿದ್ದಾರೆ. ಎಲ್ಲರ ಸಹಕಾರದಿಂದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯಾ ಪುರುಷೋತ್ತಮ್ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ 18 ಸದಸ್ಯರ ಬಲವಿದ್ದು, ಕಾರ್ಯಕಲಾಪ ಹಾಗೂ ಸಾರ್ವಜನಿಕರ ಕೆಲಸಗಳಿಗೆ ಸಮಸ್ಯೆಯಾಗಿತ್ತು. ನೂತನ ಕಟ್ಟಡ ನಿರ್ಮಾಣವಾಗಿರುವುದರಿಂದ ಹಲವು ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಶಾಸಕರು ಹಾಗೂ ಸಂಸದರ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಎಸ್.ಮಂಜೇಗೌಡ, ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ನಟರಾಜ ನಾಕಲಗೂಡು, ಸಿ.ವಿ.ಲಿಂಗರಾಜು, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ.ಎಲ್ ನಿಂಗರಾಜು, ಪಾಳ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್ ಇತರರಿದ್ದರು.