ಜಿಲ್ಲೆ

ಸಹಕಾರಿ ಸಂಸ್ಥೆಗಳು ಸಮಾಜಮುಖಿಯಗಿ ಕಾರ್ಯನಿರ್ವಹಿಸಲಿ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭದ ಮಾತಲ್ಲ. ಅದೇ ಸಂಸ್ಥೆ ಅಮೃತ ಮಹೋತ್ಸವ ಆಚರಿಸುತ್ತಿದೆ ಎಂದರೆ ಅಲ್ಲಿ ಪ್ರಾಮಾಣಿಕವಾಗಿ ದುಡಿದ ಮಹನೀಯರ ಪರಿಶ್ರಮ ಅನನ್ಯ ಎಂದು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು.
ಮಂಗಳವಾರ ರೈತ ಭವನದಲ್ಲಿ ಟಿಎಪಿಸಿಎಂಎಸ್‌ನ ಅಮೃತಮಹೋತ್ಸವ ಸಮಾರಂಭದಲ್ಲಿ ಅಮೃತಯಾನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಈಗಲೂ ಕೂಡಾ ಹಲವಾರು ಕಡೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿ ಕಾಣಬೇಕಿದೆ. ಜನಸಾಮಾನ್ಯರು ಹಾಗೂ ರೈತರನ್ನು ಅರ್ಥಿಕ ಶೋಷಣೆಯಿಂದ ಮುಕ್ತ ಮಾಡಿದ ಹೆಗ್ಗಳಿಕೆ ಸಹಕಾರ ಸಂಸ್ಥೆಗಳಿಗೆ ಸಲ್ಲುತ್ತದೆ ಎಂದರು.
ಆಮೇರಿಕಾ ದೇಶದ ಬಲು ದೊಡ್ಡ ಎರಡು ಬ್ಯಾಂಕ್‌ಗಳ ವ್ಯವಹಾರ ಸ್ಥಗಿತಗೊಂಡವು.ಆದರೆ ಭಾರತ ದೇಶದಲ್ಲಿ ಸಹಕಾರಿ ಸಂಸ್ಥೆಗಳು ಅರ್ಥಿಕ ಅಭಿವೃದ್ಧಿ ಹಾದಿಯಲ್ಲಿ ಸಾಗಿ ಭಾರತದ ಅರ್ಥಿಕ ಪ್ರಗತಿಗೆ ಉನ್ನತ ಕೊಡುಗೆ ನೀಡುತ್ತಿದೆ. ಪಕ್ಷ, ಪಂಗಡಗಳನ್ನು ಬದಿಗಿಟ್ಟು ಸಹಕಾರಿ ಸಂಸ್ಥೆಗಳು ಸಮಾಜಮುಖಿಯಗಿ ಕೆಲಸ ಮಾಡಬೇಕು. ಅಂತಹ ಸಂಸ್ಥೆಗಳು ಜನಮಾನಸದಲ್ಲಿ ಸದಾ ಉಳಿಯಲು ಸಾಧ್ಯ. ಸಂಸ್ಥೆ ಬೆಳೆಯಬೇಕಾದರೆ ಷೇರುದಾರರ ಪಾತ್ರ ಮಹತ್ವವಾಗಿರುತ್ತದೆ. ಹಾಗಾಗಿ ಅವರು ಜಾಗೃತರಾಗಿ ಸಂಘದ ಆಗು-ಹೋಗುಗಳ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದರು.
ಸಭಾ ಕಾರ್ಯಕ್ರಮವನ್ನು ಡಿ.ಎನ್.ಜೀವರಾಜ್ ಉದ್ಘಾಟಿಸಿದರು. ಸಭೆಯಲ್ಲಿ ದಾನಿಗಳನ್ನು ಗೌರವಿಸಲಾಯಿತು. ಅಧ್ಯಕ್ಷ ನವೀನ್, ಸಹಕಾರ ಇಲಾಖೆ ಅಪರ ನಿಬಂಧಕರಾದ ರವೀಂದ್ರ, ನವೀನ್, ಉಪ ನಿಬಂಧಕರಾದ ತೇಜಸ್ವಿನಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಸಿ.ಶಂಕರಪ್ಪ, ನಿರ್ದೇಶಕರಾದ ಎಸ್.ಎನ್.ರಾಮಸ್ವಾಮಿ, ಮ್ಯಾಮ್ಕೋಸ್ ನಿರ್ದೇಶಕ ಟಿ.ಕೆ.ಪರಾಶರ, ಅಂಬ್ಲೂರು ಸುರೇಶ್ಚಂದ್ರ ಹಾಗೂ ಸಂಸ್ಥೆ ನಿರ್ದೇಶಕರು ಉಪಸ್ಥಿತರಿದ್ದರು.