ಬಾದಾಮಿಯ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಪಿ. ದಿಡ್ಡಿ ಉದ್ಘಾಟಿಸಿದರು. ಚಂದ್ರಶೇಖರ ಬಣಕಾರ, ಶ್ರೀಶೈಲ ಕಂಕನವಾಡಿ, ಮಧುರಾಜ ಕೆ., ಎಸ್.ವೈ. ಹೊಸಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಗ್ರಾಹಕರಿಗೆ ಹಕ್ಕುಗಳ ಅರಿವಿರಲಿ

ವಿನಯ ಆಶೋಕ ನಾಯ್ಕ

ಬಾದಾಮಿ: ಸಂವಿಧಾನಬದ್ಧವಾಗಿ ಒದಗಿಸಲಾಗಿರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಗ್ರಾಹಕನಿಗೂ ಅರಿವಿರಬೇಕು ಎಂದು ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಪಿ. ದಿಡ್ಡಿ ಹೇಳಿದರು.

ನಗರದ ತಾಪಂ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕುಡಳಿತ, ವಕೀಲರ ಸಂಘ, ತಾಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಮಾತನಾಡಿ, ವಸ್ತುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ, ಕೇವಲ ಜಾಹೀರಾತುಗಳಿಗೆ ಮಾರು ಹೋಗಿ ಖರೀದಿ ಮಾಡುವುದು ಸರಿಯಲ್ಲ. ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ರಸೀದಿ ಹೊಂದಿದ್ದರೇ ಮಾತ್ರ ಗ್ರಾಹಕ ನ್ಯಾಯಾಲಯದಲ್ಲಿ ಪರಿಹಾರ ಪಡೆದುಕೊಳ್ಳಲು ಸಾಧ್ಯ ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕನವಾಡಿ ಮಾತನಾಡಿ, ಗ್ರಾಹಕರು ವಸ್ತುವನ್ನು ಖರೀದಿಸುವಾಗ ಅವುಗಳ ಮೌಲ್ಯ, ಗುಣಮಟ್ಟ ಮತ್ತು ಐಎಸ್‌ಐ ಗುರುತಿನ ಜತೆಗೆ ಉತ್ಪಾದನೆ ಮತ್ತು ಅವಧಿ ಮೀರಿದ್ದರ ಬಗ್ಗೆ ಕಡ್ಡಾಯವಾಗಿ ಪರಿಶೀಲಿಸಬೇಕು. ಏನಾದರು ವ್ಯತ್ಯಾಸವಾದರೆ ತಕ್ಷಣವೇ ಪ್ರಶ್ನಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಮಧುರಾಜ ಕೆ. ಮಾತನಾಡಿ, ಗ್ರಾಹಕರ ಹಿತ ರಕ್ಷಣೆಯ ಉದ್ದೇಶದಿಂದ 1986ರಲ್ಲಿ ಗ್ರಾಹಕರ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.

ವಕೀಲ ಎಸ್.ವೈ. ಹೊಸಮನಿ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಕಾನೂನು ಸಲಹೆಗಾರ, ನಿವೃತ್ತ ನ್ಯಾಯಾಧೀಶ ಡಿ.ವೈ. ಬಸಾಪೂರ ಹಾಗೂ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಲಾಲ ಮಾತನಾಡಿದರು. ಐ.ಕೆ. ಮುಲ್ಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ವಂದಿಸಿದರು.