ಜಿಲ್ಲೆ

ಆತ್ಮಸಾಕ್ಷಿಯೇ ನಮ್ಮ ದೇವರಾಗಲಿ: ಹೇಮಾವತಿ ವೀ.ಹೆಗ್ಗಡೆ ಆಶಯ

Avinash R

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 7ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಗಾಯಕ ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು ಅವರು ಹಾಡುಗಳನ್ನು ಕಲಿಸಿಕೊಟ್ಟರು. ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಡಿ.ಸುರೇಂದ್ರ ಕುಮಾರ್ ಕಮ್ಮಟಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು.

ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆ ಪಾತ್ರದ ಬಗ್ಗೆ ಉಪನ್ಯಾಸ ನೀಡಿ, ನಮ್ಮ ಆತ್ಮಸಾಕ್ಷಿಯೇ ನಮಗೆ ದೇವರಾಗಿದ್ದು, ಆತ್ಮಸಾಕ್ಷಿಗೆ ಸರಿಯಾಗಿ ನಾವು ಕೆಲಸ ಮಾಡಬೇಕು. ಒಬ್ಬರೇ ತಿಂದರೆ ಸುಖ, ಹಂಚಿ ತಿಂದರೆ ಸಂತೋಷ ಎಂಬ ಮಾತಿದೆ. ಸುಖಕ್ಕಿಂತ ನಮಗೆ ಹಂಚಿ ತಿಂದಾಗ ಬರುವ ಸಂತೋಷವೇ ಮುಖ್ಯ. ನೀ ನನಗಿದ್ದರೆ ನಾ ನಿನಗೆ ಎಂಬಂತೆ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ, ಗೌರವ, ಸಹಕಾರ, ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಜೀವನ ನಡೆಸಬೇಕು ಎಂದರು.

ಭಾವನೆ ಮತ್ತು ಸಾಹಿತ್ಯ ಇಲ್ಲದ ಭಜನೆ ನೀರಸವಾಗುತ್ತದೆ. ಉತ್ತಮ ಸಾಹಿತ್ಯ ಮತ್ತು ಭಾವನೆ ಹೊಂದಿರುವ ಭಜನೆ ಕಂಠಪಾಠವಾಗಿ ಹಾಡಬೇಕು. ಶಿಬಿರಾರ್ಥಿಗಳು ತಮ್ಮ ದೋಷಗಳನ್ನೆಲ್ಲ ಇಲ್ಲೇ ಬಿಟ್ಟು ಹೋಗಿ, ಉತ್ತಮ ಅಭ್ಯಾಸ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಿ ಎಂದು ಹಾರೈಸಿದರು.

ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ 4ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ರಾಜ್ಯ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್, ಕಾರ್ಯದರ್ಶಿ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯ ಶ್ರೀನಿವಾಸರಾವ್, ರತ್ನವರ್ಮ ಜೈನ್ ದಿನದ ಕಾರ್ಯಕ್ರಮ ಸಂಘಟಿಸಿದರು.

ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರಕುಮಾರ್, ಸದಸ್ಯ ಪದ್ಮರಾಜ್ ಜೈನ್, ರಾಘವೇಂದ್ರ ನಿರೂಪಿಸಿದರು. ಮಹಾವೀರ ಅಜ್ರಿ, ಭವಾನಿ, ಮೋಹನ್ ಶೆಟ್ಟಿ, ಸತೀಶ್ ಪೈ ಸಹಕರಿಸಿದರು. ಕುಣಿತ ಭಜನೆ ತರಬೇತಿ ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯಾಧಿಕಾರಿಗಳಾಗಿ ಸಂತೋಷ್ ಪಿ.ಕರ್ತವ್ಯ ನಿರ್ವಹಿಸಿದರು.

ಸತ್ಕಾರ್ಯಗಳಿಂದ ನೆಮ್ಮದಿ

ದೈಹಿಕ ರೋಗಗಳಿಗೆ ನಮ್ಮ ಮನಸೇ ಮೂಲ ಕಾರಣ. ಮುಖದಲ್ಲಿ ಸದಾ ಮುಗುಳ್ನಗೆ ನಮ್ಮ ಬೆಲೆ ಹೆಚ್ಚಿಸುತ್ತದೆ. ಪರೋಪಕಾರ, ಪ್ರೀತಿ, ಸೇವೆ, ದಯೆ, ಅನುಕಂಪ, ಆತಿಥ್ಯ ಮೊದಲಾದ ಸತ್ಕಾರ್ಯಗಳಿಂದ ಮನಸ್ಸು ತೃಪ್ತಿಯಿಂದ ಹಗುರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಕೋಪ, ದ್ವೇಷ, ಚಿಂತೆ, ಟೀಕೆ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗ ಕಾಡುತ್ತವೆ. ಪ್ರತಿಯೊಬ್ಬರೂ ವಾರದಲ್ಲಿ ಒಂದು ದಿನವಾದರೂ ಮೊಬೈಲ್ ಬಳಸದಿರುವ ವ್ರತ ಮಾಡಿದರೆ ಎಲ್ಲರಿಗೂ ಸತ್ಕಾರ್ಯ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ಎಂದು ಹೇಮಾವತಿ ವೀ.ಹೆಗ್ಗಡೆ ಅವರು ಹೇಳಿದರು.

ದಾಸರ ಹಾಡುಗಳು, ಶರಣರ ವಚನಗಳು, ಜೈನರ ಭಜನೆಗಳು, ತತ್ವ-ಸಿದ್ಧಾಂತಗಳು ನಮ್ಮ ಸಾರ್ಥಕ ಬದುಕಿಗೆ ಉತ್ತಮ ಸಂದೇಶ ನೀಡುತ್ತವೆ. ಪ್ರತಿ ಮನೆಯಲ್ಲಿ ತಾಯಿ-ತಂದೆಯನ್ನು ದೇವರಂತೆ ಕಾಣಬೇಕು. ಪುರುಷರು ಮಹಿಳೆಯರಿಗೆ ಗೌರವ ಕೊಡುವ ಸಂಸ್ಕಾರ ಮನೆಯಿಂದಲೆ ಆರಂಭವಾಗಬೇಕು. ಇಂದು ಪುರುಷರು ಮಾಡುವ ಎಲ್ಲ ಕೆಲಸ ಮಹಿಳೆಯರು ಮಾಡುತ್ತಾರೆ. ಆದರೆ ಮಹಿಳೆಯರು ಮಾಡುವ ಅಡುಗೆ, ಸ್ವಚ್ಛತೆ ಇತ್ಯಾದಿಯನ್ನು ಪುರುಷರು ಯಾಕೆ ಮಾಡುವುದಿಲ್ಲ ಎಂದು ಅವರು ಯಕ್ಷಪ್ರಶ್ನೆ ಹಾಕಿದರು. ಸಿನೆಮಾ ತಾರೆಯರು, ರಾಜಕಾರಣಿಗಳು, ಮಠಾಧಿಪತಿಗಳು ನಮಗೆ ರೋಲ್ ಮೋಡೆಲ್‌ಗಳಲ್ಲ. ನಮಗೆ ನಾವೇ ರೋಲ್‌ಮೋಡೆಲ್‌ಗಳಾಗಬೇಕು. ಹೇಮಾವತಿ ವೀ. ಹೆಗ್ಗಡೆ, ಧರ್ಮಸ್ಥಳ
ಹೇಮಾವತಿ ವೀ. ಹೆಗ್ಗಡೆ, ಧರ್ಮಸ್ಥಳ