ಜಿಲ್ಲೆ

ಕಾಫಿ ರಾಷ್ಟ್ರೀಯ ಪಾನೀಯವಾಗಲಿ

reportermys

ಆದರ್ಶ್ ಅದ್ಕಲೇಗಾರ್ ಮಡಿಕೇರಿ


ಕೊಡಗಿನ ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ಒಂದು ಜಿಲ್ಲೆ ಒಂದು ಉತ್ಪನೆ ಯೋಜನೆಯಡಿ ಕೊಡಗು ಜಿಲ್ಲೆಯಿಂದ ಕಾಫಿಯನ್ನು ಆಯ್ಕೆ ಮಾಡಿಕೊಂಡಿದೆ. ಜತೆಗೆ, ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿಯಲ್ಲಿ ಶೇ.೭೦ರಷ್ಟು ಕರ್ನಾಟಕದಲ್ಲಿಯೇ ಬೆಳೆಯುತ್ತದೆ. ಇದರಲ್ಲಿ ಶೇ.೪೦ರಷ್ಟು ಪಾಲು ಕೊಡಗು ಹೊಂದಿದೆ. ೨೦೨೧-೨೨ರಲ್ಲಿ ಜಿಲ್ಲೆಯಲ್ಲಿ ಒಟ್ಟು ೧ ಲಕ್ಷದ ೨೧ ಸಾವಿರದ ೬೮೪ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗಿದೆ. ಈ ಸಾಲಿನಲ್ಲಿ ೧ ಲಕ್ಷದ ೨೪ ಸಾವಿರದ ೪೪೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯ ಗುರಿ ಹೊಂದಲಾಗಿದೆ. ಆದರೆ, ಇಂದು ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.


ಹೆಚ್ಚುತ್ತಿರುವ ತೋಟದ ನಿರ್ವಹಣಾ ವೆಚ್ಚ, ಕಾರ್ಮಿಕರ ಕೊರತೆ, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ. ಹೀಗೆ ಹಲವು ಸಮಸ್ಯೆಗಳಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಬಹುತೇಕರು ಕಾಫಿ ತೋಟದ ಸಹವಾಸವೇ ಬೇಡ ಎಂದು ದೂರ ಸರಿಯುವ ವಾತಾವರಣವೂ ನಿರ್ಮಾಣವಾಗಿದೆ.


ಕಾಫಿ ಕೆಫೆಗಳಲ್ಲಿ ಒಂದು ಕೆ.ಜಿ. ಕಾಫಿ ಬೀಜಕ್ಕೆ ೧೫೨೦ ರೂ. ಬೆಲೆ ಇದೆ. ಇದರ ಪ್ರಕಾರ ಒಂದು ಚೀಲ ಚೆರಿ ಕಾಫಿ ಬೆಳೆಗೆ ೩೮೦೦೦ ರೂ ಬೆಲೆ ದೊರೆಯಬೇಕಾಗಿದೆ. ಆದರೆ ಕಾಫಿ ಬೆಳೆಯುವ ರೈತನಿಗೆ ಕೇವಲ ೩೫೦೦ ರಿಂದ ೪೦೦೦ ರೂ ಪ್ರಸ್ತುತ ಸಿಗುತ್ತಿದೆ. ಕಾಫಿ ಬೆಳೆ ಬೆಳೆಯುವ ಬೆಳೆಗಾರನಿಗೆ ಕಾಫಿ ಕೆಫೆಗಳಲ್ಲಿ ದೊರೆಯುವ ದರದ ಅರ್ಧ ಭಾಗವಾದರೂ ಸಿಗಬೇಕು. ಈ ಎಲ್ಲವು ಕಾರ್ಯರೂಪಕ್ಕೆ ಬರಬೇಕಾದರೆ, ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹ ಜಿಲ್ಲೆಯ ರೈತರದ್ದಾಗಿದೆ. ಈ ಹಿನ್ನೆಲೆ ಜಿಲ್ಲೆಯ ಬೆಳೆಗಾರರ, ಸಾರ್ವಜನಿಕರ, ಸಂಘಸಂಸ್ಥೆಗಳ ಪ್ರಮುಖರ ಅಭಿಪ್ರಾಯ ಲೌಡ್‌ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.

ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಕೇಂದ್ರ ಸರ್ಕಾರ ಘೋಷಿಸಲೇಬೇಕು. ಇದರಿಂದ ಕಾಫಿಗೆ ದೊಡ್ಡಮಟ್ಟದ ಪ್ರಚಾರ ಸಿಗುತ್ತದೆ. ಕಾಫಿಗೆ ಆಂತರೀಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಉತ್ತಮ ಬೆಲೆಯೂ ಸಿಗುವ ಅವಕಾಶ ಹೆಚ್ಚಿವೆ. ಕಾಫಿ ಉದ್ಯಮ ಬೆಳೆಯಬೇಕಾದರೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸಬೇಕು.
-ಮೋಹನ್ ಬೋಪಣ್ಣ, ಅಧ್ಯಕ್ಷರು, ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ

ಕಾಫಿ ಉದ್ಯಮದಿಂದ ವಿದೇಶಿ ವಿನಿಮಯ ಹಾಗು ತೆರಿಗೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ೧೨ಸಾವಿರ ಕೋಟಿ ರೂ.ಗಳ ಆದಾಯ ಬರುತ್ತಿದೆ ಎಂಬುದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಆದರೆ ಸರ್ಕಾರದಿಂದ ಪ್ರೋತ್ಸಾಹವಿಲ್ಲದೆ. ಕಾಫಿ ತೋಟಗಳು ರೋಗಪೀಡಿತವಾಗಿದೆ. ಕಾಫಿ ನಶಿಸುವ ಹಂತದಲ್ಲಿದೆ. ಕಾಫಿಯನ್ನು ರಾಷ್ಟ್ರೀಯ ಪಾನಿಯ ಮಾಡಿದರೆ, ಉತ್ತಮ ಬೆಲೆಯ ನಿರೀಕ್ಷೆ ಮಾಡಬಹುದು.
-ಎಚ್.ಆರ್.ಗಗನ್, ಕಾಫಿ ಬೆಳೆಗಾರ, ಹಿರಿಕರ ಗ್ರಾಮ

ಕಾಫಿ ಕುಡಿಯುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ. ಕಾಫಿ ಸೇವನೆಯಿಂದ ಸಾಕಷ್ಟು ಉತ್ತಮ ಗುಣಗಳು ನಮ್ಮ ದೇಹ ಸೇರುತ್ತದೆ. ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಣೆ ಮಾಡಿದರೆ, ನಂಬಿಕೊಂಡು ಬದುಕುತ್ತಿರುವ ಕೋಟ್ಯಂತರ ಜನರ ಬದುಕು ಹಸನಾಗುತ್ತದೆ. ಅದರಿಂದ ಕಾಫಿಯನ್ನು ರಾಷ್ಟ್ರೀಯ ಪಾನೀಯ ಅಂತ ಘೋಷಣೆ ಮಾಡಬೇಕು.
ಮಂಡೆಪಂಡ ಬೋಸ್ ಮೊಣ್ಣಪ್ಪ, ಕಾಫಿ ಬೆಳೆಗಾರರು

ಕಾಫಿ ಕೆಫೆಗಳಲ್ಲಿ ಕೆಜಿಗೆ ಅತ್ಯುತ್ತಮ ಬೆಲೆ ಇದೆ. ಆದರೆ ಅದು ಬೆಳೆಗಾರರಿಗೆ ಸಿಗುತಿಲ್ಲ. ಜತೆಗೆ, ಕಾಫಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಪರಿಣಾಮ ಕಾಫಿಯನ್ನು ರಾಷ್ಟ್ರೀಯ ಪಾನೀಯ ಮಾಡಬೇಕು.
ಎಸ್.ಎನ್.ರಘು, ಕಾಫಿ ಬೆಳೆಗಾರರು, ಶನಿವಾರಸಂತೆ

ಕಾಫಿ ಬೆಳೆ ಬೆಳೆಯಲು ಖರ್ಚು ವೆಚ್ಚ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಸರಿಯಾದ ಇಳುವರಿ ಸಿಗುತ್ತಿಲ್ಲ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ರಾಷ್ಟ್ರೀಯ ಪಾನಿಯ ಮಾಡಿದರೆ ಒಂದಷ್ಟು ಉತ್ತಮ ಬೆಲೆ ಬೆಳೆಗಾರರಿಗೆ ಸಿಗಲಿದೆ. ಅನೇಕ ವರ್ಷಗಳ ಬೇಡಿಕೆ ಇದಾಗಿದೆ. ಈ ಬಾರಿಯಾದರು ಬೇಡಿಕೆ ಇಡೇರಿದರೆ ಮಾತ್ರ ಕಾಫಿ ಬೆಳೆಗಾರರು ಸಂಕಷ್ಟದಿಂದ ಪಾರಾಗಲಿದ್ದಾರೆ.
ಶರತ್ ಶೇಖರ್, ಉಪಾಧ್ಯಕ್ಷರು, ಶನಿವಾರಸಂತೆ ಕಾಫಿ ಬೆಳೆಗಾರರ ಸಂಘ

ಉತ್ತರ ಭಾರತೀಯರ ಲಾಬಿಯಿಂದಾಗಿ ಚಹಕ್ಕೆ ಮಾತ್ರ ಮನ್ನಣೆ ಸಿಗುತ್ತಿದೆ. ಆರೋಗ್ಯಕರ ಅಂಶ ಒಳಗೊಂಡಿರುವ ದಕ್ಷಿಣ ಭಾರತದ ಕಾಫಿ ರಾಜಕೀಯ ಲಾಬಿಯಿಂದ ಹಿಂದುಳಿದಿದೆ. ಈ ಹಿಂದಿನಿಂದಲೇ ಚಹದಷ್ಟೆ ಪ್ರಾಮುಖ್ಯತೆ ಕಾಫಿಗೆ ಸಿಗಬೇಕೆಂಬ ಕೂಗಿತ್ತು. ಆದರೆ, ಆಗಿರಲಿಲ್ಲ. ಇಂದು ರಾಷ್ಟ್ರೀಯ ಪಾನೀಯವಾಗಿ ಘೋಷಣೆ ಮಾಡಲು ಸಕಾಲವಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡುವ ಮೂಲಕ ದಕ್ಷಿಣ ಭಾರತದ ಭಾವನೆಗಳಿಗೆ ಗೌರವ ನೀಡಿದಂತಾಗುತ್ತದೆ.
ಅಚ್ಚಂಡೀರ ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ

ಕಾಫಿ ಸ್ವಾಧ ಆರೋಗ್ಯಕ್ಕೆ ಉತ್ತಮ. ಕಾಫಿ ರಾಷ್ಟ್ರೀಯ ಪಾನೀಯವಾದಲ್ಲಿ ಹೆಚ್ಚಿನ ಬೆಲೆ ಲಭ್ಯವಾಗಲಿದೆ. ಬೆಳೆಗಾರರಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕರ ಎಚ್ಚೆತ್ತುಕೊಂಡು ಘೋಷಣೆ ಮಾಡಬೇಕು.
ಚಂದ್ರಶೇಖರ್, ಉಪ ನಿರ್ದೇಶಕರು, ಕಾಫಿ ಮಂಡಳಿ

ಪ್ರಪಂಚದಲ್ಲಿ ಕಾಫಿ ದೊಡ್ಡ ಪ್ರಮಾಣದಲ್ಲಿ ವಿಧೇಶಿವಿನಿಮಯವಾಗುತ್ತಿದೆ. ಇದನ್ನು ಉಳಿಸಿಕೊಳ್ಳಲು ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಣೆ ಮಾಡುವ ಅನಿವಾರ್ಯತೆಯಿದೆ. ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಕಾಫಿ ತೊರೆದು ಬೇರೆ ಬೆಳೆಗಳತ್ತ ಮುಖಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು.
ಮಾಚಿಮಾಡ.ಎಂ.ರವೀಂದ್ರ, ಸಂಚಾಲಕರು, ಕಾಫಿ ರಾಷ್ಟ್ರೀಯ ಪಾನೀಯ ಹೋರಾಟ ಸಮಿತಿ

ಕಾಫಿಗೆ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದರೆ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಸಿಗುತ್ತದೆ. ಕಾಫಿ ಬೆಳೆಗಾರರು ಇಂದು ಸಂಕಷ್ಟದಲ್ಲಿದ್ದು, ಲಭ್ಯವಾಗುತ್ತಿರುವ ಬೆಲೆ ಕಾರ್ಮಿಕರಿಗೆ ಕೊಡಲು ಸಾಲುತಿಲ್ಲ. ವರ್ಷದಿಂದ ವರ್ಷಕ್ಕೆ ಕಾರ್ಮಿಕರ ವೇತನ ಹೆಚ್ಚಾಗುತ್ತಿದೆ. ಆದರೆ, ಕಾಫಿ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದೆ. ಕಾಫಿಯನ್ನು ರಾಷ್ಟ್ರೀಯ ಪಾನಿಯವಾಗಿಸಬೇಕು.
ವಿರೇಂದ್ರ ಕುಮಾರ್, ಕಾಫಿ ಬೆಳೆಗಾರರು, ಹಂಡ್ಲಿ ಗ್ರಾಮ

ಕಾಫಿಯನ್ನು ರಾಷ್ಟ್ರೀಯ ಪಾನೀಯ ಮಾಡುವುದರಿಂದ ಬೆಳೆಗಾರರ ಹಲವು ಸಂಕಷ್ಟ ಪರಿಹಾರವಾಗುತ್ತದೆ. ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚಾದರೆ ಮಾರುಕಟ್ಟೆಯು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆ ಆಗುತ್ತದೆ. ಕಾಫಿಯಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಉತ್ತರ ಭಾರತದ ಜನತೆಗೆ ಜಾಗೃತಿ ಮೂಡಿಸುವಂತಾಗಬೇಕು.
ಕೂರನ ಪ್ರಕಾಶ್, ಅಧ್ಯಕ್ಷರು, ಕೊಡಗು ಗೌಡ ಸಂಘ ಕುಶಾಲನಗರ

ಜಿಲ್ಲೆಯಲ್ಲಿ ಕಾಫಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ, ಸರಿಯಾದ ರೀತಿಯಲ್ಲಿ ಬೆಲೆ, ಬೆಂಬಲ ಬೆಲೆ ಸಿಗುತ್ತಿಲ್ಲ. ಜತೆಗೆ ಕಾಫಿ ತೋಟದ ನಿರ್ವಾಹಣೆ ವೆಚ್ಚ ಕೂಡ ಹೆಚ್ಚಾಗಿದೆ. ಇದರಿಂದ ಮುಕ್ತಿ ಪಡೆಯಲು ಕಾಫಿ ಬೆಳೆಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಬೇಕು.
-ಪೇರಿಯಂಡ ಜಯಂತಿ ಉತ್ತಪ್ಪ, ಗ್ರಹಿಣಿ, ಬಲಮುರಿ ಗ್ರಾಮ