ಜಿಲ್ಲೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ

ಎನ್.ವೆಂಕಟೇಶ್

ಮಾಜಿ ಸಂಸದ ಎಸ್.ಮುನಿಸ್ವಾಮಿ ಪಟ್ಟು | ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌ಗೆ ಕಿಡಿ | ಮುಡಾದ ನೈತಿಕ ಹೊಣೆ ಹೊರುವಂತೆ ಒತ್ತಾಯ


ಶಿಡ್ಲಘಟ್ಟ : ದೇಶದ ಸಂವಿಧಾನದ ಮೇಲೆ ಕನಿಷ್ಠ ಗೌರವವಿದ್ದರೂ ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ನಿಷ್ಪಕ್ಷಪಾತ ತನಿಖೆಗಾಗಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೋಲಾರ ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.
ನಗರದ ಬಿಜೆಪಿಯ ಸೇವಾಸೌಧ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಮೇಲೆ ಎಫ್‌ಐಆರ್ ಆದಾಗ ನಿಷ್ಪಕ್ಷಪಾತ ತನಿಖೆಗೆ ರಾಜೀನಾಮೆ ನೀಡಬೇಕೆಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಒತ್ತಾಯಿಸಿದ್ದರು. ಆಗ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಈಗ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.
ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ: ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ, ವಿಧಾನಸೌಧದಲ್ಲಿ ಪಾಕಿಸ್ತಾನ್‌ದ ಪರ ಘೋಷಣೆ ಕೂಗಿದವರ ವಿರುದ್ಧದ ಕೇಸ್‌ಗಳನ್ನು ರಾಜ್ಯ ಸರ್ಕಾರ ಹಿಂಪಡೆಯುವಂತಹ ಕೀಳುಮಟ್ಟದ ರಾಜಕೀಯಕ್ಕೆ ಮುಂದಾಗಿದೆ. ಈ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ದೇಶ, ರಾಜ್ಯಕ್ಕಾಗಿ, ನೀರಾವರಿ ಹೋರಾಟ, ವಿದ್ಯಾರ್ಥಿಗಳ ಹೋರಾಟದ ಕೇಸ್‌ಗಳನ್ನು ವಾಪಸ್ ಪಡೆಯಲಿ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರು, ಪೊಲೀಸರ ಮೇಲೆ ಕಲ್ಲು ತೂರುವವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದೆಂದರೆ ಏನರ್ಥ ಎಂದು ರಾಜ್ಯ ಸರ್ಕಾರದ ಕ್ರಮ ಖಂಡಿಸಿದರು.
ಕೇವಲ ವೋಟ್ ಬ್ಯಾಂಕ್‌ಗಾಗಿ ಯಾವುದೋ ಒಂದು ಕೋಮು, ಒಂದು ಧರ್ಮದ ಪರ ನಿಲ್ಲುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಈಗ ವಿಧಾನಸಭೆಗೆ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಸೋಲು ಗ್ಯಾರಂಟಿ ಎಂದರು.
ಇತ್ತೀಚೆಗಷ್ಟೇ ನಡೆದ ಜಮ್ಮು- ಕಾಶ್ಮೀರ, ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ದು, ಮತ್ತೊಮ್ಮೆ ಬಿಜೆಪಿ ಸಾಮರ್ಥ್ಯ ಸಾಬೀತುಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಅಬಾಧಿತವಾಗಿ ಮುಂದುವರಿದಿದೆ ಎಂದು ಹೇಳಿದರು.
ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಪುರುಷೋತ್ತಮ, ರಾಮಕೃಷ್ಣಪ್ಪ, ಕನಕಪ್ರಸಾದ್, ಮಂಜುಳಮ್ಮ ಇತರರು ಇದ್ದರು.

ಗುರಿ ಮೀರಿ ಸದಸ್ಯತ್ವ ನೋಂದಣಿ
ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಸೀಕಲ್ ರಾಮಚಂದ್ರಗೌಡ ನೇತೃತ್ವದಲ್ಲಿ ಈಗಾಗಲೇ 30 ಸಾವಿರ ಮಂದಿಯ ನೋಂದಣಿಯಾಗಿದೆ. ಅಭಿಯಾನದಲ್ಲಿ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಡ್ಲಘಟ್ಟ ಪ್ರಥಮ, ಚಿಕ್ಕಬಳ್ಳಾಪುರ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ ಎಂದು ಮುನಿಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ 1 ಕೋಟಿ ಸದಸ್ಯತ್ವದ ಗುರಿ ಹೊಂದಿದ್ದು, ಈಗಾಗಲೇ 60 ಲಕ್ಷ ಸದಸ್ಯತ್ವ ನೋಂದಣಿ ಆಗಿದೆ. ಶಿಡ್ಲಘಟ್ಟದಲ್ಲಿ 50 ಸಾವಿರ ಗುರಿಯಿದ್ದು, ಈಗಾಗಲೇ 30 ಸಾವಿರ ಸದಸ್ಯತ್ವ ನೋಂದಣಿಯಾಗಿದೆ. 15 ದಿನಗಳಲ್ಲಿ 20 ಸಾವಿರ ಸದಸ್ಯತ್ವ ಆಗಲಿದೆ ಎಂದರು.