ಅಮ್ಮತ್ತಿಯಲ್ಲಿರುವ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಚೇರಿಯಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ನೋಂದಾಯಿತ ಕ್ಲಬ್ಗಳ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.  
ಜಿಲ್ಲೆ

ಫುಟ್ಬಾಲ್ ಬೆಳವಣಿಗೆಗೆ ಕ್ಲಬ್ಗಳು ಕೈಜೋಡಿಸುವಂತಾಗಲಿ

ಸಿದ್ದಾಪುರ: ಜಿಲ್ಲೆಯ ಎಲ್ಲೆಡೆ ಫುಟ್ಬಾಲ್ ವೇಗವಾಗಿ ಬೆಳೆಯುತ್ತಿದ್ದು, ಇನ್ನಷ್ಟು ಉನ್ನತ ಮಟ್ಟಕ್ಕೆ ಫುಟ್ಬಾಲ್ ಕ್ರೀಡೆ ಬೆಳವಣಿಗೆ ಸಾಧಿಸುವ ಅವಶ್ಯಕತೆ ಇದೆ. ಹಾಗಾಗಿ ಜಿಲ್ಲೆಯ ಫುಟ್ಬಾಲ್ ಕ್ಲಬ್ಗಳು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮನವಿ ಮಾಡಿದರು.

ಅಮ್ಮತ್ತಿಯಲ್ಲಿರುವ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಸಿದ್ದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ನೋಂದಾಯಿತ ಕ್ಲಬ್ನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನ 2024-25ರ ಸಾಲಿನ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್‌ಪಂದ್ಯಾವಳಿಯ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು. ಅಲ್ಲದೆ ತಳಮಟ್ಟದಿಂದಲೇ ಜಿಲ್ಲೆಯಲ್ಲಿ ಫುಟ್ಬಾಲ್ ಬೆಳೆಯಲು ಅಸೋಸಿಯೇಷನ್ ಹೊಸ ಯೋಜನೆ ಕೈಗೊಳ್ಳಲು ತೀರ್ಮಾನಿಸಿದ್ದು, ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಪಿ.ಎ.ನಾಗೇಶ್ (ಈಶ್ವರ್) ಮಾತನಾಡಿ, ಸಂಸ್ಥೆಯ ಎಲ್ಲ ಕ್ಲಬ್ಗಳು ಡಿ.21ರೊಳಗೆ ಕ್ಲಬ್ ಗಳ ನವೀಕರಣ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಶುಲ್ಕ ಪಾವತಿಸಲು ತಡ ಮಾಡಿದ ಕ್ಲಬ್ಗಳಿಗೆ ಈ ಬಾರಿ ಲೀಗ್ ಪಂದ್ಯಾವಳಿಯ ಆಟಗಾರರ ಫಾರ್ಮ್ ನೀಡುವುದಿಲ್ಲ. ಅಲ್ಲದೆ ಫಾರ್ಮ್ ಪಡೆಯುವ ಕ್ಲಬ್ಗಳು ಜನವರಿಯಲ್ಲಿ ತಮ್ಮ ಆಟಗಾರರ ಫಾರ್ಮ್ ಅನ್ನು ಕಡ್ಡಾಯವಾಗಿ ಜಿಲ್ಲಾ ಸಂಸ್ಥೆಗೆ ನೀಡಬೇಕು. ಸದ್ಯದಲ್ಲೇ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ದಿನಾಂಕವನ್ನು ಘೋಷಿಸಲಾಗುವುದೆಂದು ಮಾಹಿತಿ ನೀಡಿದರು.

ಕ್ಯಾಪ್ಟನ್ಸ್ 11 ಪಾಲಿಬೆಟ್ಟ ಹಾಗೂ ನಕ್ಷತ್ರ ಅಕಾಡೆಮಿ ಮುಖ್ಯಸ್ಥ ಹರೀಶ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಫುಟ್ಬಾಲ್ ಆಟಗಾರರಿಗೆ ಸೂಕ್ತ ವೇದಿಕೆ ನೀಡಬೇಕಾಗಿದೆ. ಕನಿಷ್ಠ ಒಬ್ಬ ಆಟಗಾರ ವರ್ಷದಲ್ಲಿ 35 ಪಂದ್ಯ ಆಡಿದರೆ ಮಾತ್ರ ಆತ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಅಂಡರ್ 14 ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಆಸಕ್ತಿ ಹೊಂದಿದ್ದು, ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಹಕಾರ ನೀಡಬೇಕೆಂದು ಹರೀಶ್ ಮನವಿ ಮಾಡಿದರು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ನೋಂದಾಯಿತ 16ಕ್ಕೂ ಹೆಚ್ಚು ಫುಟ್ಬಾಲ್ ಕ್ಲಬ್ಗಳು ಭಾಗವಹಿಸಿದ್ದವು. ವಿವಿಧ ಕ್ಲಬ್ಗಳ ಪದಾಧಿಕಾರಿಗಳು ಲೀಗ್ ಪಂದ್ಯಾವಳಿ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಉಪಾಧ್ಯಕ್ಷ ಕ್ರಿಸ್ಟೋಫರ್, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಖಜಾಂಚಿ ದೀಪು ಮಾಚಯ್ಯ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಸಂಘದ ಅಧ್ಯಕ್ಷ ಇಬ್ರಾಹಿಂ, ಸದಸ್ಯರಾದ ಲಿಜೇಶ್ ಅಮ್ಮತ್ತಿ, ಮಹೇಂದ್ರ ಸುಂಟ್ಟಿಕೊಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್ ಸಕುಮಾರ್, ಇಸ್ಮಾಯಿಲ್ ಕಂಡಕರೆ ಇದ್ದರು.