ಬಳ್ಳಾರಿ : ಎಲ್ಲರೂ ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳಬೇಕು ಹಾಗೂ ದಿನನಿತ್ಯ ಅದನ್ನು ಪರಿಪಾಲನೆ ಮಾಡಬೇಕು. ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಎಚ್.ಪುಷ್ಪಾಂಜಲಿ ದೇವಿ ಹೇಳಿದರು.
ನಗರದ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಸ ಮುಕ್ತ ಭಾರತ ಕಾರ್ಯಕ್ರಮದ ಜಾಗೃತಿ ಅಭಿಯಾನದ ವಿಡಿಯೋ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತಾ ಕಾರ್ಯ ಒಂದು ದಿನಕ್ಕೆ ಸೀಮಿತವಾಗದೆ, ದಿನನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಕಸವನ್ನು ಎಲ್ಲೆಂದರೆಲ್ಲೆ ಬೀಸಾಡದೆ, ನಿಗದಿಪಡಿಸಿದ ವಾಹನಗಳಿಗೆ ಕಸ ನೀಡಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ನಾಗರಿಕರ ಸ್ವಚ್ಛತೆಯ ಕರ್ತವ್ಯ ಎಂಬ ಭಿತ್ತಿಚಿತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ವಾಸ್ ಇಂಡಿಯಾ ಎನ್‌ಜಿಒ ನ ಶಶಿಧರ್ ಕಲ್ಮಠ ಅವರು ಜಾಗೃತಿ ಅಭಿಯಾನದ ಉದ್ದೇಶ ಹಾಗೂ ಕರ್ತವ್ಯಗಳ ಕುರಿತು ವಿಶ್ಲೇಷಣೆ ನೀಡಿದರು. ಬಳಿಕ ರಾಷ್ಟೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯಾಧೀಶರಿಂದ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಪ್ರಿನ್ಸಿಪಲ್ ಕೌಟುಂಬಿಕ ನ್ಯಾಯಾಧೀಶ ಸಿದ್ಧಲಿಂಗ ಪ್ರಭು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿನಯ್.ಡಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ವಿಮಲ್ ಆರ್.ನಂದಾಗಾಂವ್, ಪ್ರಿನ್ಸಿಪಲ್ ಹಿರಿಯ ಶ್ರೇಣಿ ಹಾಗೂ ಸಿಜೆಎಂ ನ್ಯಾಯಾಧೀಶ ಸತೀಶ್ ಜೆ.ಬಾಳಿ, ಒಂದನೇ ಅಪರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಅಪರ್ಣಾ, ಎರಡನೇ ಅಪರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ನಸ್ರತ್ ಮುಖ್ತಾರ್ ಅಹ್ಮದ್ ಖಾನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್.ಎನ್.ಹೊಸಮನೆ, ಪ್ರಿನ್ಸಿಪಲ್ ಕಿರಿಯ ಶ್ರೇಣಿ ಹಾಗೂ ಸಿಜೆಎಂ ನ್ಯಾಯಾಧೀಶರಾದ ಅಮಿತ್ ಘಟ್ಟಿ, 1ನೇ ಕಿರಿಯ ಅಪರ ಸಿವಿಲ್ ನ್ಯಾಯಾಧೀಶ ಈರಪ್ಪ ದವಳೇಶ್ವರ, 2ನೇ ಕಿರಿಯ ಅಪರ ಸಿವಿಲ್ ನ್ಯಾಯಾಧೀಶ ಸಣ್ಣಹನಮಗೌಡ, 4ನೇ ಕಿರಿಯ ಅಪರ ಸಿವಿಲ್ ನ್ಯಾಯಾಧೀಶೆ ರೂಪಾ ಚಿನಿವಾರ, 5ನೇ ಕಿರಿಯ ಅಪರ ಸಿವಿಲ್ ನ್ಯಾಯಾಧೀಶ ಮುದುಕಪ್ಪ ಒಡನ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.