ಜಿಲ್ಲೆ

ಅಕ್ಷರ ದಾಸೋಹದಲ್ಲಿ ಇರಲಿ ಸ್ವಚ್ಛತೆ

Davangere - Desk - Mahesh Babu E

ನಾಯಕನಹಟ್ಟಿ: ಬಿಸಿಯೂಟ ತಯಾರಿಸುವ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಈಶ್ವರಪ್ಪ ಹೇಳಿದರು.

ಪೋಷಣ್ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಅಡುಗೆ ಸಿಬ್ಬಂದಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಯ ಆರಂಭಕ್ಕೆ ಅರ್ಧ ಗಂಟೆಗೂ ಮುಂಚೆ ನೀವು ಶಾಲೆಗೆ ಬಂದು ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸಿಕೊಂಡು ಸರಿಯಾದ ಸಮಯಕ್ಕೆ ಮಕ್ಕಳಿಗೆ ಹಾಲನ್ನು ವಿತರಿಸಬೇಕು. ತರಕಾರಿಯನ್ನು ಉಪ್ಪು ನೀರಿನಲ್ಲಿ ಸ್ವಚ್ಛಗೊಳಿಸಿ, ಬಳಿಕ ಅಡುಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಸ್ವಂತ ಮಕ್ಕಳ ರೀತಿ ವಿದ್ಯಾರ್ಥಿಗಳನ್ನು ಕಾಣಬೇಕು. ಅವರಿಗೆ ಗುಣಮಟ್ಟದ ಜತೆಗೆ ಪ್ರೀತಿ ತೋರಬೇಕು. ಆಗ ಅವರಲ್ಲಿ ನಿಮ್ಮ ಕುರಿತು ಗೌರವ ಭಾವನೆ ಮೂಡತ್ತದೆ. ಜತೆಗೆ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.

ಹಿರಿಯ ಮುಖ್ಯಶಿಕ್ಷಕ ಪಿ.ಒ.ತಿಪ್ಪೇಸ್ವಾಮಿ ಮಾತನಾಡಿ, ನಾಯಕನಹಟ್ಟಿ ಎಂದರೆ ಮಾಡಿದಷ್ಟು ನೀಡು ಭಿಕ್ಷೆ ಎನ್ನುವ ತಾರಕ ಮಂತ್ರ ಬೋಧಿಸಿದ ನೆಲ. ಇಲ್ಲಿ ನಾವೇನು ಕೆಲಸ ಮಾಡುತ್ತೇವೆ, ಅದಕ್ಕೆ ತಕ್ಕನಾದ ಪ್ರತಿಫಲ ದೊರಕುತ್ತದೆ ಎನ್ನುವುದು ನಿಮ್ಮ ಮನದಲ್ಲಿರಲಿ ಎಂದರು.

ಉಪ ಪ್ರಾಚಾರ್ಯ ಬಿ.ಆರ್.ರಮೇಶ್, ಜಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಮ್ಮ, ಬಡ್ತಿ ಮುಖ್ಯಶಿಕ್ಷಕ ರಾಮಚಂದ್ರಪ್ಪ ಮರೆಕ್ಕನವರ್, ಬಿ.ಎಚ್.ತಿಪ್ಪೇರುದ್ರಪ್ಪ ಮಾತನಾಡಿದರು.