ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಶನಿವಾರ ಆಯೋಜಿಸಿದ್ದ ದಕ್ಷಿಣಕಾಶಿ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಉದ್ಘಾಟಿಸಿದರು. ಜನಾರ್ದನ್, ಗೋವಿಂದರಾಜು, ಸುಬ್ಬರಾವ್, ಎಚ್.ಎಸ್. ಶಂಕರ್, ಚೌಡೇಗೌಡ ಇತರರು ಇದ್ದರು.  
ಜಿಲ್ಲೆ

ಪಠ್ಯಗಳಲ್ಲಿ ಶಾಸ್ತ್ರೀಯ ಸಂಗೀತ ಬೋಧನಾ ಕ್ರಮ ಅಳವಡಿಸಲಿ

ಅರಕಲಗೂಡು: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಉದ್ದೇಶದಿಂದ ಪ್ರಾಥಮಿಕ ಹಂತದಿಂದಲೇ ಶಾಸ್ತ್ರೀಯ ಸಂಗೀತ ಬೋಧನಾ ಕ್ರಮಗಳನ್ನು ಪಠ್ಯಗಳಲ್ಲಿ ಅಳವಡಿಸಬೇಕು ಎಂದು ವಿದ್ವಾನ್ ಆರ್.ಕೆ. ಪದ್ಮನಾಭ ಪ್ರತಿಪಾದಿಸಿದರು.

ತಾಲೂಕಿನ ರಾಮನಾಥಪುರದಲ್ಲಿ ಶನಿವಾರ ಆಯೋಜಿಸಿದ್ದ ದಕ್ಷಿಣಕಾಶಿ ವಿದ್ಯಾಸಂಸ್ಥೆಯ ಕುವೆಂಪು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಧರ್ಮ, ಪಂಗಡಗಳಿರಬಹುದು. ಆದರೆ ಸಂಗೀತಕ್ಕಿರುವುದು ಒಂದೇ ಭಾಷೆ, ಮಕ್ಕಳಲ್ಲಿ ಮಾನಸಿಕ ಹಾಗೂ ಬೌದ್ದಿಕ ವಿಕಾಸನಕ್ಕೆ ಸಂಗೀತ ಶಿಕ್ಷಣ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಆಂಗ್ಲ ಭಾಷೆ ಕಲಿಕೆ ಅಗತ್ಯವಿದೆ. ಆದರೆ ತಾಯಿಯನ್ನು ಪ್ರೀತಿಸಿದಂತೆ ಮಾತೃಭಾಷೆ ಕನ್ನಡವನ್ನು ಪ್ರೀತಿಸಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳಿಗೆ ಪಾಲಕರು ಗುಣಮಟ್ಟದ ಶಿಕ್ಷಣ ಕೊಡಿಸುವುದನ್ನು ಜವಾಬಾರಿಯಾಗಿ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ದಕ್ಷಿಣಕಾಶಿ ವಿದ್ಯಾಸಂಸ್ಥೆಯ ಸಾಧನೆ ಮಹತ್ತರವಾಗಿದೆ ಎಂದು ಶ್ಲಾಘಿಸಿದರು.

ದಕ್ಷಿಣಕಾಶಿ ವಿದ್ಯಾಸಂಸ್ಥೆ ಅಧ್ಯಕ್ಷ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಲ್. ಗೋವಿಂದರಾಜು, ಉಪಾಧ್ಯಕ್ಷ ಮೋಹನ್ ಕುಮಾರ್, ಮಾಜಿ ಅಧ್ಯಕ್ಷೆ ವಸಂತಕುಮಾರಿ ಮಹದೇವಪ್ಪ, ಕಾರ್ಯದರ್ಶಿ ಜಿ. ದೇವರಾಜು, ಖಜಾಂಚಿ ವೇದಾವತಿ ಬಸವರಾಜು, ನಿರ್ದೇಶಕ ಬಿ.ಆರ್. ರಾಜೇಗೌಡ, ತಾಲೂಕು ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಎ.ಆರ್. ಸುಬ್ಬರಾವ್, ಶಿಕ್ಷಣ ಸಂಯೋಜಕ ಸದಾಶಿವಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್, ಮುಖ್ಯ ಶಿಕ್ಷಕರಾದ ಸರಸ್ವತಿ ಕುಮಾರಿ, ಪ್ರೇಮರಾಜ್, ಎ.ಬಿ. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಎಸ್. ಶಂಕರ್, ಹಾರಂಗಿ ಮಹಾ ಮಂಡಲ ಅಧ್ಯಕ್ಷ ಚೌಡೇಗೌಡ, ಕೊಣನೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ. ರಮೇಶ್, ನಿವೃತ್ತ ಅಧಿಕಾರಿ ಗಂಗಾಧರ್ ಇತರರು ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.