19ಊಓ1: ಹುಣಸೂರು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿ.ಡಿ.ಹರೀಶ್‌ಗೌಡ, ಎಚ್.ವಿಶ್ವನಾಥ್, ಎ.ರಾಮೇಗೌಡ, ತಟ್ಟೆಕೆರೆ ಶ್ರೀನಿವಾಸ್ ಇತರರು ಇದ್ದರು. 
ಜಿಲ್ಲೆ

ಮಕ್ಕಳು ಪಿಯುಸಿಯಲ್ಲಿ ಜಾಗ್ರತೆಯ ಹೆಜ್ಜೆ ಇರಿಸಲಿ

ಮಾದೇಶ್ ತಿ.ನರಸೀಪುರ

ಹುಣಸೂರು: ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪಿಯುಸಿ ಅತ್ಯಂತ ಸಂಕೀರ್ಣ ಸಮಯವಾಗಿದ್ದು, ಜಾಗರೂಕತೆಯಿಂದ ಮುಂದಡಿಯಿಡಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹದಿಹರೆಯದ ಈ ಸೂಕ್ಷ್ಮ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರ ಬಯಕೆಯನ್ನು ಈಡೇರಿಸುವತ್ತ ಮತ್ತು ತಮ್ಮ ಭವಿಷ್ಯವನ್ನು ರೂಪಿಸುವತ್ತ ಗಮನಹರಿಸಬೇಕು. ಭವಿಷ್ಯದ ದೇಶದ ಪ್ರಜೆಗಳಾಗಿ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು. ದೇಶದಲ್ಲಿ ಆಡಳಿತ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಆಡಳಿತ ನಡೆಸಬೇಕಾದ ಮಹಿಳೆಯ ಬದಲಿಗೆ ಅವಳ ಪುರುಷ ಆಡಳಿತ ನಡೆಸುವ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಬದಲಾವಣೆ ನಿಮ್ಮಿಂದ ಸಾಧ್ಯ. ಪುರುಷ ಪ್ರಧಾನ ಸಮಾಜ ಎನ್ನುವ ಮನೋಭಾವವನ್ನು ಬದಲಿಸುವತ್ತ ಗಮನಹರಿಸಿ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಶಿಕ್ಷಣ ಸಚಿವನಾಗಿದ್ದಾಗ ಆರಂಭಿಸಿದ ಬಿಸಿಯೂಟ ಯೋಜನೆಗೆ ಮಠ ಮಾನ್ಯಗಳು, ಮೌಲ್ವಿಗಳು, ಚರ್ಚ್ ಮುಖ್ಯಸ್ಥರ ಪ್ರತಿರೋಧದ ನಡುವೆ ಯಶಸ್ವಿಯಾಗಿ ಮುನ್ನಡೆದು ಇಡೀ ದೇಶವ್ಯಾಪಿ ಯೋಜನೆ ಜಾರಿಗೊಂಡಿತು. ಬಿಸಿಯೂಟ ಕೇವಲ ಅನ್ನ ನೀಡುವುದಲ್ಲ. ಬದಲಾಗಿ ಅದು ಈ ದೇಶದ ಜಾತ್ಯತೀತ ಮನೋಭಾವದ ಸಂಕೇತ ಎಂದು ಅಭಿಪ್ರಾಯಪಟ್ಟರು.

ಈ ದೇಶದ ಪ್ರಜಾತಂತ್ರದ ವೈಶಿಷ್ಟ್ಯವೇ ಅದು. ಇತಿಹಾಸ ವಿಷಯವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ದೇಶದ ಸರ್ವ ಧರ್ಮ ಮನೋಭಾವದ ಇತಿಹಾಸವನ್ನು ತಿಳಿಯಬೇಕು. ರಾಜ್ಯಶಾಸ್ತ್ರ ವ್ಯಾಸಂಗ ಮಾಡುವ ವಿದ್ಯಾರ್ಥಿ ಪ್ರಜಾಪ್ರಭುತ್ವ ಈ ದೇಶದ ಕಣಕಣದಲ್ಲಿ ಹಾಸುಹೊಕ್ಕಾಗಿರುವುದನ್ನು ಅರಿಯಬೇಕು. ನಮ್ಮ ದೇಶದಲ್ಲಿ ಏನಿಲ್ಲವೆಂದರೂ ಬದುಕಬಹುದು. ಆದರೆ ಸಾಮಾನ್ಯ ಜ್ಞಾನದ ಅರಿವು ನಿಮಗಿರಲಿ ಎಂದರು.

ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವಿಷಯವಾರು ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಆಯಾ ವಿಷಯವಾರು ಉಪನ್ಯಾಸಕರು ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಿದರು. ಪ್ರಾಂಶುಪಾಲ ಎ.ರಾಮೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭಾ ಸದಸ್ಯ ಹರೀಶ್‌ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತಟ್ಟೆಕೆರೆ ಶ್ರೀನಿವಾಸ್, ಸದಸ್ಯರಾದ ಅಸ್ವಾಳ್ ಕೆಂಪೇಗೌಡ, ವೀರಭದ್ರಪ್ಪ, ಕೆ.ಕೃಷ್ಣ, ಮಮತಾ ಗಜೇಂದ್ರ, ಶಿವಕುಮಾರ್, ನಟರಾಜ್, ಸುಬ್ರಮಣ್ಯ ಇತರರು ಇದ್ದರು. ವಿದ್ಯಾರ್ಥಿನಿಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.