ಚಿಕ್ಕೋಡಿ: ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಸತತ ಅಧ್ಯಯನದ ಜತೆಗೆ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಬೆಂಗಳೂರು ಸಬ್‌ಇನ್ಸ್ಪೆಕ್ಟರ್ ರುದ್ರೇಗೌಡ ಬಿರಾದಾರ ಹೇಳಿದರು.
ಇಲ್ಲಿನ ಸಿಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗುವ ವಿದ್ಯಾರ್ಥಿಗಳು ನಿಗದಿತ ಪಠ್ಯಕ್ರಮ ಹಾಗೂ ಪ್ರಶ್ನೆಪತ್ರಿಕೆಗಳ ವಿಶ್ಲೇಷಿತ ಅಧ್ಯಯನ ಅಗತ್ಯ ಎಂದರು.
ಸಿಎಲ್‌ಇ ಸಂಸ್ಥೆ ಸಹಕಾರ್ಯದರ್ಶಿ ಎನ್.ಎಸ್.ವಂಟಮುತ್ತೆ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿನ ತಯಾರಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸದಾ ಶ್ರಮಿಸುತ್ತದೆ ಎಂದರು.
ಪ್ರಾಚಾರ್ಯ ಎಸ್.ಎಸ್.ಮೆಟಗುಡ್ಡ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸುವಲ್ಲಿ ಮಹಾವಿದ್ಯಾಲಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮಡಿವಾಳ ಬಿರಾದಾರ, ಗೋವಿಂದರೆಡ್ಡಿ ಮೊರಬ, ಉಪನ್ಯಾಸಕ ಮಹಾವೀರ ಸನದಿ, ವಿಠ್ಠಲ ಖಾನುಗೋಳ, ಶ್ರೀಧನಾ ಮಾಳಿ ಇತರರಿದ್ದರು. ಸಮೃದ್ಧಿ ಬನ್ನನ್ನವರ ಸ್ವಾಗತಿಸಿದರು. ಭೂಮಿಕಾ ನಾಯಿಕ ನಿರೂಪಿಸಿದರು. ಪೂರ್ಣಿಮಾ ಕಮತೆ ವಂದಿಸಿದರು.