ಗಂಡಸಿ: ಮಕ್ಕಳು ಬುದ್ಧಿವಂತರಾಗಿದ್ದರೆ ಸಾಲದು, ವಿದ್ಯೆ ಕಲಿಸಿದ ಗುರುವಿಗೆ ಗೌರವ ಕೊಡುವ ಸಂಸ್ಕಾರವನ್ನು ಕಲಿಯಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ಶ್ರೀ ಶಂಭುಲಿಂಗೇಶ್ವರ ಆಂಗ್ಲ ಮಾಧ್ಯಮ (ಬಿಜಿಎಸ್) ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜಿಎಸ್ ಚಿಣ್ಣರ ಸಂಭ್ರಮ-2025 ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಜತೆಗೆ ಸಂಸ್ಕಾರದ ಪಾಠವನ್ನು ಹೇಳಿಕೊಡಬೇಕು. ಆಗ ಮಾತ್ರ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಜ್ಞಾನದ ಜತೆ ಅವರ ಮನಸ್ಸನ್ನೂ ಪಾಲಕರು ಅರ್ಥ ಮಾಡಿಕೊಳ್ಳಬೇಕು. ಅವರ ಚಲನವಲನ ಮತ್ತು ಮನಸ್ಥಿತಿ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಪೂರಕ ವಾತಾವರಣ ಕಲ್ಪಿಸಬೇಕು ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮದಲ್ಲಿ 9 ಮತ್ತು 10ನೇ ತರಗತಿ ತೆರೆಯಲಾಗುವುದು. ಶಾಲೆಯ ಉತ್ತಮ ವಾತಾವರಣಕ್ಕೆ ಬೇಕಾಗುವ ಎಲ್ಲ್ಲ ರೀತಿಯ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದರು.
ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ.ಗುರು ಬಸವರಾಜು, ಅಯ್ಯಣ್ಣ, ಪಂಚಾಕ್ಷರಯ್ಯ, ಕುಮಾರ್, ನಾಗರಾಜು, ಶ್ರೀ ಶಂಭುಲಿಂಗೇಶ್ವರ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಮತಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾರಾಣಿ, ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.