ಜಿಲ್ಲೆ

ಮಕ್ಕಳು ದೇಶಭಕ್ತಿ ಬೆಳೆಸಿಕೊಳ್ಳಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 78 ವರ್ಷ ಗತಿಸಿದೆ. ಇವತ್ತಿಗೂ ಭಾರತ ಮಾತಾಕಿ ಜೈ ಎಂದರೆ ಅದೊಂದು ಕೋಮುವಾದ ಎಂಬ ಗುಮಾನಿಯಿಂದ ನೋಡುವ ಒಂದು ವರ್ಗ, ಒಂದಿಷ್ಟು ರಾಜಕೀಯ ಪಕ್ಷಗಳು ಭಾರತದಲ್ಲಿ ಸಕ್ರಿಯವಾಗಿರುವುದು ದುರದೃಷ್ಟಕರ ಎಂದು ಸಂಸ್ಕಾರ ಭಾರತಿ ಕರ್ನಾಟಕ ಉತ್ತರದ ಸಂಚಾಲಕ ಡಾ. ಬಿ.ಎಂ.ಶರಭೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ವನಿತಾ ಸೇವಾ ಸಮಾಜದ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕಾರ ಭಾರತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಭಾರತ ಮಾತ ಪೂಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಮಾತೆಯನ್ನು ಪೂಜಿಸುವುದರೊಂದಿಗೆ ಮಕ್ಕಳು ದೇಶಭಕ್ತಿ, ರಾಷ್ಟ್ರ ಪ್ರೇಮವನ್ನು ಜೀವನ ವಿಧಾನವನ್ನಾಗಿ ಅಳವಡಿಸಿಕೊಳ್ಳಬೇಕು ಎಂದರು.

ಡಾ. ಗೀತಾ ಉತ್ತೂರ ಮಾತನಾಡಿ, ಮಕ್ಕಳು ದೇಶ ಭಕ್ತರ ಜೀವನ ಸಾಧನೆಗಳನ್ನು ಅಧ್ಯಯನ ನಡೆಸಿ ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈಗ ಹದಿಹರೆಯದ ಹೆಣ್ಣುಮಕ್ಕಳಿಗೆ ಸಾಮಾಜಿಕ ಆಪ್ತತೆ, ಪ್ರೀತಿಯ ಅವಶ್ಯಕತೆ ಇದೆ ಎಂದರು.

ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಮಾತನಾಡಿ, ಇಂದಿನ ಯುವಕರು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ಸಂಸ್ಕಾರ ಭಾರತಿ ಧಾರವಾಡ ಮಹಾನಗರ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವನಿತಾ ಸೇವಾ ಸಮಾಜದ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಪ್ರಸಾದ ಮಡಿವಾಳರ, ವಿಷಯಾ ಜೇವೂರ, ಶೋಭಾ ಪರೆಟ್​, ಡಾ.ನಾಗೇಂದ್ರ ದೊಡ್ಡಮನಿ, ಅಶೋಕ ಮೊಕಾಶಿ, ವೀರಣ್ಣ ಪತ್ತಾರ, ಸಾಧನಾ ಮಿರಜಕರ್​, ಶ್ರುತಿ ಕುಲಕರ್ಣಿ, ಆರತಿ ದೇವಶಿಖಾಮಣಿ, ಇತರರು ಇದ್ದರು.

ಶಿಲ್ಪಾ ಪಾಂಡೆ ನಿರೂಪಿಸಿದರು. ಡಾ.ಶ್ರೀಧರ ಕುಲಕರ್ಣಿ ವಂದಿಸಿದರು.