ಜಿಲ್ಲೆ

ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳು ವಿಮುಕ್ತರಾಗಲಿ

ಶ್ರೀರಂಗಪಟ್ಟಣ: ಬಾಲ್ಯಾವಸ್ಥೆಯಲ್ಲಿ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ್ಳುವುದು ಅಪರಾಧವಾಗಿದ್ದು, 6ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಬಾಲಕಾರ್ಮಿಕ ಪದ್ಧತಿಯಿಂದ ವಿಮುಕ್ತಗೊಳಿಸಬೇಕು ಎಂದು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗೋಪಾಲಕೃಷ್ಣ ರೈ ತಿಳಿಸಿದರು.


ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತದ ಸಮ್ಮುಖದಲ್ಲಿ ಶಿಕ್ಷಣ ಇಲಾಖೆ ಶಾಲಾ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.


ರಾಜ್ಯದಲ್ಲಿ ಬಾಲ ಕಾರ್ಮಿಕ ಪದ್ಧತಿ ಸಾಕಷ್ಟು ಹತೋಟಿಗೆ ಬಂದಿದ್ದರೂ ಈಗಲೂ ಕೆಲವಡೆ ಕದ್ದುಮುಚ್ಚಿ ಮಕ್ಕಳನ್ನು ಕೂಲಿ ಕೆಲಸಗಳಿಗೆ ಒಳಪಡಿಸುವ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಾಗರಿಕ ಸಮಾಜದಲ್ಲಿ ಇದು ಅಪರಾಧ ಕೃತ್ಯವಾಗಿದ್ದು, ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಮಕ್ಕಳಿಂದ ಕೆಲಸ ಮಾಡಿಸಿಕೊಳ್ಳುವ ಮಾಲೀಕರು ಅಥವಾ ಕೆಲಸಕ್ಕೆ ಸೇರಿಸುವ ಪಾಲಕರ ವಿರುದ್ಧವೂ ಪ್ರಕರಣ ದಾಖಲಾಗಲಿದೆ. ಕಡು ಬಡವರಾಗಲೀ ಅಥವಾ ಮಧ್ಯಮ ಕುಟುಂಬಗಳ ಮಕ್ಕಳಿಗಾಗಲೀ ಸರ್ಕಾರ ಉಚಿತ ಸಮವಸ್ತ್ರ, ಶೈಕ್ಷಣಿಕ ಪುಸ್ತಕ, ಪರಿಕರಗಳು ಹಾಗೂ ಪೌಷ್ಟಿಕ ಆಹಾರದ ವ್ಯವಸ್ಥೆಯೊಂದಿಗೆ ಶಿಕ್ಷಣವನ್ನು ಕಲ್ಪಿಸುತ್ತಿದ್ದು, ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಗಳಿಗೆ ಸೇರಿ ಶಿಕ್ಷಿತರಾಗಬೇಕು. ಇಂತಹ ಕೃತ್ಯಗಳಿಗೆ ಯಾವುದೇ ಮಗು ಒಳಪಟ್ಟಿದ್ದರು ಯಾರೇ ಆದರೂ ಸರ್ಕಾರದ ಗಮನಕ್ಕೆ ತರಬೇಕು. ಜತೆಗೆ ನಿಮ್ಮ ಸುತ್ತಮುತ್ತಲಿನ ಕಂಡುಬರುವ ನಿರ್ಗತಿಕ ಮಕ್ಕಳಿಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ನೆರವಾಗಿ. ಶಿಕ್ಷಣ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆದು ತಮ್ಮ ಬದುಕು ರೂಪಿಸಿಕೊಳ್ಳುವ ಜತೆಗೆ ದೇಶದ ಕಾನೂನು ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ತಿಳಿಯಲು ಸಹಕಾರಿಯಾಗಲಿದೆ ಎಂದರು.


ಬಳಿಕ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳ ಪಥ ಸಂಚಲನದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ತೆರಳಿ ಪುರಜನರಿಗೆ ಬಾಲಕಾರ್ಮಿಕ ನೀತಿ ವಿರುದ್ಧ ಮಾಹಿತಿ ನೀಡಿ ಕಾನೂನು ಮತ್ತು ಶಿಕ್ಷಣದ ಮಹತ್ವದ ಕುರಿತು ಅಧಿಕಾರಿಗಳಿಂದ ತಿಳಿಸಿಕೊಡಲಾಯಿತು.


ನ್ಯಾಯಾಧೀಶರಾದ ಎಂ.ಡಿ.ರೂಪಾ, ಎಚ್.ಮಹದೇವಪ್ಪ, ಹನುಮಂತರಾಯಪ್ಪ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಬಿಇಒ ಆರ್.ಪಿ.ಮಹೇಶ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ಪವನ್‌ಗೌಡ, ಪೊಲೀಸ್ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.