ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೋಡೆ ಇದ್ದಾರೆ.  
ಜಿಲ್ಲೆ

ಚೈತ್ರಾ ಕುಂದಾಪುರಗೆ ಮಂಪರು ಪರೀಕ್ಷೆಯಾಗಲಿ; ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಆಗ್ರಹ

ವಿಜಯಪುರ: ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಚೈತ್ರಾ ಕುಂದಾಪುರಳನ್ನು ಸ್ಟಾರ್ ಪ್ರಚಾರಕಿ ಎಂದು ತಲೆ ಮೇಲೆ ಹೊತ್ತು ಊರೂರು ತಿರಗಿದ್ದಲ್ಲದೇ ಮುಸ್ಲಿಂರ ವಿರುದ್ಧ ಎತ್ತಿ ಕಟ್ಟಿದ ಬಿಜೆಪಿ ಮತ್ತು ಸಂಘ ಪರಿವಾರದವರು ಇದೀಗ ತಮಗೂ ಚೈತ್ರಾ ಕುಂದಾಪುರಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿರುವುದು ವಿಪರ್ಯಾಸ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಕಿಚಾಯಿಸಿದರು.

ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಪೂಜಾರ ಎಂಬುವರಿಂದ 5 ಕೋಟಿ ರೂಪಾಯಿ ವಂಚಿಸಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪರಿಣಾಮ ದೊಡ್ಡ ದೊಡ್ಡ ಕುಳಗಳ ಹೆಸರು ಬಹಿರಂಗಗೊಳ್ಳುತ್ತಿವೆ. ಆದರೆ, ಈ ವಿಷಯ ತಮಗೆ ಮೊದಲೇ ಗೊತ್ತಿತ್ತು ಎಂದು ಹೇಳುವ ಸಿ.ಟಿ. ರವಿ, ಚಕ್ರವರ್ತಿ ಸೂಲಿಬೆಲೆಯಂಥವರನ್ನೂ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಬೇಕು. ಅಷ್ಟೇ ಅಲ್ಲ ಶಾಸಕ ಬಸನಗೌಡ ಪಾಟೀಲ ಸಹ ಚೈತ್ರಾಳೊಂದಿಗೆ ಇರುವ ಫೋಟೊ ಹರಿದಾಡುತ್ತಿದ್ದು ಅವರನ್ನೂ ತನಿಖೆಗೆ ಒಳಪಡಿಸಬೇಕು. ಚೈತ್ರಾಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಇಂಥ ಇನ್ನೂ ಅನೇಕರ ಹೂರಣ ಹೊರಬೀಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಯಾವುದೇ ಬೆಂಬಲ ಇಲ್ಲದೇ ಚೈತ್ರಾ ಕುಂದಾಪುರ ದುಡ್ಡು ಪಡೆಯಲು ಹೇಗೆ ಸಾಧ್ಯ? ಈ ಚೈತ್ರಾ ಕುಂದಾಪುರ ಯಾರು? ಯಾವ ಗರಡಿಯಲ್ಲಿ ತರಬೇತಿ ಪಡೆದಿದ್ದಾರೆ? ಆ ಗರಡಿಯಲ್ಲಿರುವವರು ಯಾರು? ಅವರ ಸಾಹಿತ್ಯ ಮತ್ತು ಸಿದ್ಧಾಂತ ಎಂಥದ್ದು ಎಂಬುದರ ಸಂಪೂರ್ಣ ತನಿಖೆಯಾಗಬೇಕು. ಕಳೆದ ವರ್ಷ ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರು ಆರ್‌ಎಸ್‌ಎಸ್ ಆಳ- ಅಗಲ ಎಂಬ ಪುಸ್ತಕ ಬರೆದರು. ಇದೀಗ ಚೈತ್ರಾಳ ಪ್ರಕರಣ ಗಮನಿಸಿದರೆ ಇನ್ನಷ್ಟು ಆಳ- ಅಗಲ ಇದೆ ಎಂಬ ಅನುಮಾನವಿದ್ದು ಆ ನಿಟ್ಟಿನಲ್ಲಿ ತನಿಖೆಯಾಗಬೇಕೆಂದರು.

ಕೆಜೆ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿ ಗಲಭೆಯಾದಾಗ ಮುಸ್ಲಿಂ ಸಮುದಾಯದ ಮೇಲೆ ಆರೋಪ ಮಾಡುವ ಸೂಲಿಬೆಲೆ ಇದೀಗ ಏಕೆ ಸುಮ್ಮನಾಗಿದ್ದಾರೆ? ಯಾರೋ ಮಾಡುವ ಕೃತ್ಯಕ್ಕೆ ಒಂದಿಡೀ ಸಮುದಾಯವನ್ನು ಗುರಿಪಡಿಸುವುದಾದರೆ ಚೈತ್ರಾಳ ಪ್ರಕರಣವನ್ನು ಏನೆಂದು ಬಣ್ಣಿಸುವುದು? ಆ ಬಗ್ಗೆ ಸೂಲಿಬೆಲೆ ಚಕಾರವೆತ್ತುವುದಿಲ್ಲವೇಕೆ? ಎಂದು ಗಣಿಹಾರ ಪ್ರಶ್ನಿಸಿದರು.

ಇನ್ನು ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಇತ್ತೀಚೆಗೆ ಮೀಸಲಾತಿ ವಿಚಾರದಲ್ಲಿ ಮುಸ್ಲಿಂ ಅಥವಾ ಯಾವುದೇ ಸಮುದಾಯದ ಮೀಸಲಾತಿ ಕಿತ್ತುಕೊಂಡಾದರೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲಿ, ನಾವು ಹಸಿದಿದ್ದೇವೆ, ಭಿಕ್ಷೆ ಕೊಡಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಸ್ವಾಮೀಜಿಗಳ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ, ಯಾವುದೇ ಸಮುದಾಯದ ಮೀಸಲಾತಿ ಕಿತ್ತು ಕೊಡಿ ಎಂಬುದು ಸರಿಯಲ್ಲ. ಭಿಕ್ಷೆ ಪದ ಬಳಸಿದ್ದು ಸರಿಯಲ್ಲ. ಬಸವಣ್ಣನವರು ಕಾಯಕ ಮತ್ತು ದಾಸೋಹದಂಥ ಶ್ರೇಷ್ಠ ವಿಚಾರ ಪ್ರತಿಪಾದಿಸಿದವರು. ಹೀಗಾಗಿ ಅಂಥ ಪದ ಬಳಕೆ ಸರಿಯಲ್ಲ. ಮತ್ತು ದಾರಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡುವುದು ತರವಲ್ಲ. ಜನರ ಭಾವುಕತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ಮೇಲೆ ಎತ್ತಿಕಟ್ಟು ಕಾರ್ಯ ಸರಿಯಲ್ಲ ಎಂದರು.
ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೋಡೆ ಇದ್ದರು.