ಜಿಲ್ಲೆ

ಬ್ರಾಹ್ಮಣರು ಮೌಲ್ಯದೊಂದಿಗೆ ಮುನ್ನಡೆಯಲಿ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ಬ್ರಾಹ್ಮಣರು ಋಷಿಮುನಿಗಳ ಗೋತ್ರ ಪರಂಪರೆಯಿಂದ ಬಂದವರು. ಅಂತಹ ಬ್ರಾಹ್ಮಣರು ಪೌರೋಹಿತ್ಯಕ್ಕಾಗಿ, ಹಣ ಮಾಡುವುದಕ್ಕಾಗಿ ಸೀಮಿತಗೊಳ್ಳದೇ, ಮೌಲ್ಯದ ಜತೆಯಲ್ಲಿ ಮುನ್ನಡೆಯಬೇಕು ಎಂದು ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.

ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ಪಾಠಶಾಲೆಯಲ್ಲಿ ಹಮ್ಮಿಕೊಂಡಿರುವ 21 ದಿನಗಳ ವಸಂತ ವೇದ ಸಂಸ್ಕೃತ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೇದದ ಮೂಲಕ ಜ್ಞಾನ ಸಂಪಾದನೆ, ಆರೋಗ್ಯಕ್ಕಾಗಿ ಯೋಗ ಮತ್ತು ಸಜ್ಜನರ ಸಹವಾಸ ರೂಢಿಸಿಕೊಂಡರೆ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಾಹ್ಮಣರೇನೂ ಅರ್ಜಿ ಹಾಕಿ ಆ ಜಾತಿಯಲ್ಲಿ ಹುಟ್ಟಿಲ್ಲ. ತಮ್ಮ ಜಾತಿಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು. ಕೆಲವರು ಬ್ರಾಹ್ಮಣರನ್ನು ಟೀಕಿಸುವುದನ್ನು ಕಾಣುತ್ತೇವೆ. ಅಂತಹವರು ಅವರ ಕಷ್ಟಕಾಲದಲ್ಲಿ ಬ್ರಾಹ್ಮಣರ ಕಾಲಿಗೆ ಬೀಳುವುದನ್ನೂ ಕಂಡಿದ್ದೇವೆ. ಸಮಾಜದಲ್ಲಿ ನೆಮ್ಮದಿ, ಕುಟುಂಬದಲ್ಲಿ ಸುಖ ನೆಲೆಸಬೇಕಾದರೆ ಪುರೋಹಿತರೇ ಬೇಕಾಗುತ್ತಾರೆ. ಬ್ರಾಹ್ಮಣರೂ ಸಮಾಜದಲ್ಲಿ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳ ಮೂಲಕ ಬ್ರಾಹ್ಮಣ ವಟುಗಳಿಗೆ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದರು.

ಋಷಿಕುಲ ಸಂಸ್ಥೆಯ ಮುಖ್ಯಸ್ಥ ಡಾ. ವಿಘ್ನೕಶ್ವರ ಭಟ್ಟ ಬಾಗಿನಕಟ್ಟಾ, ಸವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ಶಂಕರ ಭಟ್ಟ ಮಾತನಾಡಿದರು. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಇತರರಿದ್ದರು. ಅಧ್ಯಾಪಕ ಡಾ. ಶಿವರಾಮ ಭಾಗ್ವತ ಮಣ್ಕುಳಿ ಕಾರ್ಯಕ್ರಮ ನಿರ್ವಹಿಸಿದರು.