ಜಿಲ್ಲೆ

ಬಿಜೆಪಿ ಗಟ್ಟಿಗೊಳಿಸುವ ಕೆಲಸವಾಗಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಲ ಕಡೆಗಳಲ್ಲಿ ಎಲ್ಲ ತರಹದ ದೌರ್ಜನ್ಯ ಆರಂಭವಾಗಿವೆ. ಆದರೆ ಇದಕ್ಕೆ ಹೆದರುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಎಲ್ಲರೂ ಸೇರಿ ಹೋರಾಟ ಮಾಡಿ ಮತ್ತೆ ಬಿಜೆಪಿ ಗಟ್ಟಿಗೊಳಿಸೋಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಧಾರವಾಡ ಕ್ಷೇತ್ರದ ಮತದಾರರಿಗೆ ಮಾಜಿ ಶಾಸಕ ಅಮೃತ ದೇಸಾಯಿ ಶುಕ್ರವಾರ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಗೆ ಸೋಲು ಹೊಸದಲ್ಲ. ಆರಂಭದಲ್ಲಿ 2 ಸೀಟು ಗೆದ್ದ ಸಂದರ್ಭದಲ್ಲಿ ದೋ ನಂಬರ್ ಪಾರ್ಟಿ ಎಂದು ಗೇಲಿ ಮಾಡಿದ್ದರು. ಆದರೆ ಈಗ ಜಗತ್ತಿನಲ್ಲೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯ ವಿಧಾನಸಭೆ ಸೋಲಿನಿಂದ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ ಎಂದರು.
ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಾಠ ಕಲಿಸಬೇಕು. ಧಾರವಾಡ ಕ್ಷೇತ್ರ ವ್ಯಾಪ್ತಿಯ ಐದು ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸೋಣ. ಅಧಿಕಾರಕ್ಕೆ ಬರಲು ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಇದೀಗ ಒಂದೊಂದೇ ಷರತ್ತು ವಿಧಿಸುತ್ತಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರ ಏರಿಸಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದೆ. ಆ ಗೆಲುವಿನ ಹೊಣೆ ಕಾರ್ಯಕರ್ತರದ್ದು, ಕಾರ್ಯಕರ್ತರೇ ನನ್ನನ್ನು ಗೆಲ್ಲಿಸಿದ್ದಾರೆ ಎಂದಿದ್ದೆ. ಆದರೆ 2023ರ ಸೋಲಿನ ಹೊಣೆಯನ್ನು ಕಾರ್ಯಕರ್ತರಿಗೆ ಹೊರಿಸುವುದಿಲ್ಲ. ನಾನೇ ಹೊರುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಹು-ಧಾ ಪಶ್ಚಿಮ ವಿಧಾನ ಸಭಾಕ್ಷೇತ್ರ ಶಾಸಕ ಅರವಿಂದ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು. ಮೇಯರ್ ಈರೇಶ ಅಂಚಟಗೇರಿ, ಹು-ಧಾ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ಬಸವರಾಜ ಕೊರವರ, ಗುರುನಾಥಗೌಡ ಗೌಡರ, ಶಂಕರ ಶೇಳಕೆ, ನಿತೀನ ಇಂಡಿ, ಇತರರು ಇದ್ದರು.