ಮಾಯಮುಡಿಯ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ.ಆರ್.ಎನ್.ಕೆಂಚಾರೆಡ್ಡಿ ಮಾಹಿತಿ ನೀಡಿದರು. ನಾಗರಾಜ್ ಇದ್ದರು. 
ಜಿಲ್ಲೆ

ಕಾಫಿ ಜತೆ ಜೇನು ಸಾಕಣೆ ಉಪ ಕಸುಬಾಗಿರಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಗೋಣಿಕೊಪ್ಪಲು: ಕಾಫಿ ಬೆಳೆಗಾರರಿಗೆ ಕಾಫಿ ಜತೆಯಲ್ಲಿ ಉಪ ಕಸುಬಾಗಿ ಜೇನು ಸಾಕಣೆ ಮಾಡಬಹುದು. ಇದರಿಂದ ಲಾಭದ ಜತೆಗೆ ಕಾಫಿಯ ಉತ್ಪತಿಯೂ ಹೆಚ್ಚಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಆರ್.ಎನ್. ಕೆಂಚಾರೆಡ್ಡಿ ತಿಳಿಸಿದರು.

ನೆಸ್ಲೆ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಾಯಮುಡಿಯ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಶುಕ್ರವಾರ ರೈತರಿಗೆ ಕಾಫಿ ಕೃಷಿಯೊಂದಿಗೆ ಜೇನು ಸಾಕಣೆ ಮಹತ್ವ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಕಾಫಿ ತೋಟದಲ್ಲಿ ಪರಾಗ ಸ್ಪಶರ್ ಹೆಚ್ಚಾಗಿ ಕಾಫಿ ಫಸಲು ಹೆಚ್ಚಾಗಲು ಜೇನು ನೊಣಗಳು ಸಹಾಯ ಮಾಡುತ್ತವೆ. ಅದರ ಜತೆಯಲ್ಲಿ ಜೇನಿನಿಂದಲೂ ಆದಾಯ ಗಳಿಸಬಹುದು ಎಂದರು.

ನಂತರ ಜೇನು ಸಾಕಣೆಯ ವಿಧಾನ, ಅದರಲ್ಲಿನ ಸವಾಲುಗಳು ಕುರಿತು ರೈತರೊಂದಿಗೆ ಚರ್ಚಿಸಲಾಯಿತು. ನೆಸ್ಲೆ ಕಂಪನಿಯೊಂದಿಗೆ ನೋಂದಾಯಿತ ಸುಮಾರು 40 ರೈತರು ಇದರ ಪ್ರಯೋಜನ ಪಡೆದರು. ನೆಸ್ಲೆ ವತಿಯಿಂದ ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಇಂತಹ ಕಾರ್ಯಾಗಾರವನ್ನು ಏರ್ಪಡಿಸಿ 1000 ರೈತರಿಗೆ ಜೇನು ಪೆಟ್ಟಿಗೆಯನ್ನು ವಿತರಿಸುವ ಗುರಿ ಇದೆ. ಅದರ ಅಂಗವಾಗಿ ಮಾಯಮುಡಿಯಲ್ಲಿ ಇದು ಎರಡನೇ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮದಲ್ಲಿ ನೆಸ್ಲೆ ಬೇಸಾಯ ಶಾಸ್ತ್ರಜ್ಞ ನಾಗರಾಜ್, ಉಮಾಶಂಕರ್, ಡಾ.ಮೇಘನಾ, ಅರಣ್ಯ ಮಹಾವಿದ್ಯಾಲಯದ ಎಸ್.ಎನ್. ಆಕಾಶ್, ಬಸವನಗೌಡ ಸೇರಿದಂತೆ ರೈತರು ಮತ್ತು ಕ್ಲಬ್‌ನ ಸದಸ್ಯರು ಪಾಲ್ಗೊಂಡಿದ್ದರು.