ಮೈಸೂರು: ಆಯುಷ್ ಇಲಾಖೆ ಮತ್ತು ನಗರದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ಯುನಿವರ್ಸಿಟಿಯಲ್ಲಿ ಆಯುಷ್4ಯು ಪುಸ್ತಕದ ಎರಡನೇ ಸಂಚಿಕೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ಬಿಡುಗಡೆ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿ ಬೆಳೆಯಲು ಎಲ್ಲರ ಸಹಕಾರ ಅಗತ್ಯ ಎಂದರು.
ಆಯುರ್ವೇದ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿದೆ. ಜನರು ಬಹಳ ಉತ್ಸಾಹದಿಂದ ಆಯುರ್ವೇದ ಔಷಧ ಬಳಸುತ್ತಿದ್ದಾರೆ. ಆಯುರ್ವೇದ ವೈದ್ಯಕೀಯ ಪದ್ಧತಿಗೆ 5 ಸಾವಿರ ವರ್ಷದ ಇತಿಹಾಸವಿದೆ. ಈ ಪದ್ಧತಿಯ ಬಗ್ಗೆ ಜನರಲ್ಲಿ ವಿಶ್ವಾಸವೂ ವೃದ್ಧಿಸಿದೆ. ಇದನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಂಶೋಧನೆಗಳು ಅಗತ್ಯ ಎಂದು ಸಚಿವ ದಿನೇಶ್ ಅಭಿಪ್ರಾಯಪಟ್ಟರು.
ಆಯುರ್ವೇದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಲು ವೈಜ್ಞಾನಿಕ ತಳಹದಿಯಲ್ಲಿ ಸಂಶೋಧನೆಗಳು ನಡೆಯಬೇಕಾಗಿದೆ. ಜತೆಗೆ ಆಯುರ್ವೇದವನ್ನು ಶಾಸ್ತ್ರೀಯ ಆಧಾರದ ಮೇಲೆ ಉನ್ನತ ಸ್ತರಕ್ಕೆ ಬೆಳೆಸಬೇಕಾಗಿದೆ. ಆಯುರ್ವೇದ ಕ್ಷೇತ್ರದ ಸಂಶೋಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಪಡಬೇಕಿದೆ. ಆ ಬಗ್ಗೆ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಲೇಖನಗಳು ಹೆಚ್ಚಾಗಿ ಪ್ರಕಟವಾಗಬೇಕು ಎಂದು ಸಲಹೆ ನೀಡಿದರು.
ಆಯುಷ್ ಇಲಾಖೆ ಆಯುಕ್ತ ಶ್ರೀನಿವಾಸಲು, ಟಿಡಿಯು ಕುಲಪತಿ ದರ್ಶನ್ ಶಂಕರ್, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಲಕ್ಷ್ಮೀ ನಾರಾಯಣ ಶೆಣೈ ಇತರರು ಇದ್ದರು.