ಭದ್ರಾವತಿ ರಂಗಪ್ಪ ವೃತ್ತದಲ್ಲಿರುವ ಹೈಮಾಸ್ಟ್ ಕಂಬಕ್ಕೆ ನಗರಸಭೆ ತೂಗು ಹಾಕಿರುವ ಫಲಕ. 
ಜಿಲ್ಲೆ

ಭದ್ರಾವತಿಯಲ್ಲಿ ಫ್ಲೆಕ್ಸ್ ಬ್ಯಾನ್

Shivamogga - Desk - Praveena Kumar S

ಭದ್ರಾವತಿ: ನಗರಸಭಾ ವ್ಯಾಪ್ತಿಯಲ್ಲಿ ಇನ್ಮುಂದೆ ಹೈಮಾಸ್ಟ್ ಕಂಬಗಳಿಗೆ ಮತ್ತು ವಿದ್ಯುತ್ ಕಂಬಗಳಿಗೆ ಯಾರೂ ಜಾಹೀರಾತು ಫಲಕಗಳನ್ನು ತೂಗು ಹಾಕುವುದಾಗಲಿ, ಕಟ್ಟುವುದಾಗಲಿ ಮಾಡುವಂತಿಲ್ಲ. ಒಂದು ವೇಳೆ ವಿದ್ಯುತ್ ಕಂಬಗಳಿಗೆ ಫಲಕಗಳನ್ನು ಕಟ್ಟಿದರೆ ಕಾನೂನು ಕ್ರಮ ಜರುಗಿಸುವುದಾಗಿ ನಗರಸಭೆ ಪೌರಾಯುಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ನಗರಸಭೆ, ರಂಗಪ್ಪ ವೃತ್ತದಲ್ಲಿರುವ ಹೈಮಾಸ್ಟ್ ಕಂಬದಲ್ಲಿ ಪ್ರಕಟಣೆಯನ್ನು ತೂಗು ಹಾಕಿದೆ. ಈ ಆದೇಶ ಕೇವಲ ವಿದ್ಯುತ್ ಕಂಬಗಳಿಗೆ ಮಾತ್ರ ಅನ್ವಯಿಸಲಿದ್ದು ನಗರಸಭೆ ಅನುಮತಿ ಪಡೆದು ವೃತ್ತಗಳ ಹಾಗೂ ರಸ್ತೆಯ ಪಕ್ಕದಲ್ಲಿ ಗುಂಡಿ ತೆಗೆದು ಕೌಟೌಟ್, ಬ್ಯಾನರ್ ಕಟ್ಟಲು ಯಾವುದೆ ಅಭ್ಯಂತರವಿಲ್ಲ ಎಂದು ಪೌರಾಯುಕ್ತ ಮನುಕುಮಾರ್ ತಿಳಿಸಿದಿದ್ದಾರೆ.
ಇತ್ತೀಚೆಗೆ ವ್ಯಕ್ತಿಯ ಹುಟ್ಟುಹಬ್ಬದಿಂದ ನಿಧನದವರೆಗೂ ವಿವಿಧ ಕಾರಣಗಳಿಗಾಗಿ ಸಂಬಂಧಪಟ್ಟವರು, ಅಭಿಮಾನಿಗಳು ನಗರದ ತುಂಬೆಲ್ಲ ಫ್ಲೆಕ್ಸ್, ಬ್ಯಾನರ್ ಅಳವಡಿಸಿ ತಮ್ಮ ಅಭಿಮಾನವನ್ನು ತೋರ್ಪಡಿಸುತ್ತಿದ್ದು ಹೈಮಾಸ್ಟ್ ಕಂಬಕ್ಕೆ ಅದರಷ್ಟೇ ಎತ್ತರದ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ನಾಗರಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತವಾಗುತ್ತಿತ್ತು. ಇದರಿಂದ ಸಾರ್ವಜನಿಕರ ವಿರೋಧವೂ ಹೆಚ್ಚಾಗಿತ್ತು.
ವಕೀಲರೊಬ್ಬರು ಇತ್ತೀಚೆಗೆ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಪ್ಲೆಕ್ಸ್ ಹಾವಳಿ ತಡೆಗೆ ಲೋಕಾಯುಕ್ತ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ನಗರದ ವೃತ್ತಗಳ ಮಧ್ಯಭಾಗದಲ್ಲಿ ಆಳೆತ್ತರದ ಕಟೌಟ್, ಪ್ಲೆಕ್ಸ್‌ಗಳನ್ನು ಅಳವಡಿಸುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಎದುರಿನಿಂದ ಬರುವ ವಾಹನಗಳು ಕಾಣುವುದಿಲ್ಲ. ಅದರೊಟ್ಟಿಗೆ ನಗರ ಸೌಂದರ್ಯವೂ ಹಾಳಾಗುತ್ತಿದ್ದು ನಗರಸಭೆ ಇದರ ಬಗ್ಗೆ ಕ್ರಮ ಕೈಗೊಳ್ಳುವುದರಲ್ಲಿ ವಿಫಲವಾಗಿದೆ. ನಿಷೇಧ ಹೇರುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಉಕ್ಕಿನ ನಗರಿಯಲ್ಲಿ ಬೇಕಾಬಿಟ್ಟಿ ಪ್ಲೆಕ್ಸ್ ಅಳವಡಿಕೆಗೆ ಬ್ರೇಕ್ ಬಿದ್ದಿದೆ.
2009-10ನೇ ಸಾಲಿನಲ್ಲೇ ಅನಧಿಕೃತವಾಗಿ ಫ್ಲೆಕ್ಸ್‌ಗಳನ್ನು ಹಾಕದಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ದೇವಸ್ಥಾನ, ದೇವರು ಸಂಬಂಧಿಸಿದ ತುರ್ತು ಅಗತ್ಯತೆಯ ಬ್ಯಾನರ್ ಹೊರತುಪಡಿಸಿ ಯಾವುದೇ ವ್ಯಕ್ತಿಗತ ಫ್ಲೆಕ್ಸ್ ಹಾಕುವಂತಿಲ್ಲ ಎಂದು ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಈ ತೀರ್ಮಾನ ಹೆಚ್ಚು ದಿನ ಚಾಲ್ತಿಯಲ್ಲಿರಲಿಲ್ಲ. ಹಣ ಕಟ್ಟಿಸಿಕೊಳ್ಳಿ, ಅವಕಾಶ ಕೊಡಿ ಎಂಬ ಸಾರ್ವಜನಿಕರ ಒತ್ತಡಕ್ಕೆ ಮಣಿದ ನಗರಸಭೆ ಅಧಿಕಾರಿಗಳು ಫ್ಲೆಕ್ಸ್ ವಿಚಾರ ಕೈ ಬಿಟ್ಟಿದ್ದರು. ಇದೀಗ ಮತ್ತೊಮ್ಮೆ ಫ್ಲೆಕ್ಸ್ ಅಳವಡಿಕೆಗೆ ಕಡಿವಾಣ ಹಾಕುವ ಇಚ್ಛಾಶಕ್ತಿ ತೋರಿಸಿರುವ ನಗರಸಭೆ ಅಧಿಕಾರಿಗಳು, ನಗರ ಸೌಂದರ್ಯದ ಕಡೆಗೂ ಗಮನಹರಿಸುವರೇನೋ ಕಾದು ನೋಡಬೇಕು.