ಜಿಲ್ಲೆ

ಎಪಿಎಂಸಿ ರೈತ‌ ಸ್ನೇಹಿಯಾಗಿರಲಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರ ಶೋಷಣೆಯ ದೂರುಗಳು ಬರಬಾರದು. ವಂಚನೆ ಪ್ರಕರಣಗಳನ್ನು ತಡೆಗಟ್ಟಬೇಕು. ಎಪಿಎಂಸಿಯು ರೈತಸ್ನೇಹಿಯಾಗಿರಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದರು.

ಇಲ್ಲಿನ ಎಪಿಎಂಸಿಯ ಆವರಣ ಪರಿವೀಕ್ಷಣೆ ಹಾಗೂ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಎಪಿಎಂಸಿಯ ಸೋರಿಕೆ ತಡೆಗಟ್ಟಿ ಆರ್ಥಿಕವಾಗಿ ಸದೃಢಗೊಳಿಸಬೇಕು. ಆರ್ಥಿಕ ಅಪರಾಧಗಳಿಗೆ ಅವಕಾಶ ನೀಡಬಾರದು. ಬಳ್ಳಾರಿ ಎಪಿಎಂಸಿಯ ಬಗ್ಗೆ ವರ್ತಕರು ಮತ್ತು ರೈತರಿಂದ ವ್ಯಾಪಕ ದೂರುಗಳಿವೆ. ಅಂತಹ ಅಧಿಕಾರಿಗಳು ಬದಲಾಗಬೇಕೆಂದು ಎಪಿಎಂಸಿ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದರು.

ಮಾರುಕಟ್ಟೆಯಲ್ಲಿ ದಲ್ಲಾಳಿಗಳು ರೈತರಿಂದ ಹೆಚ್ಚುವರಿ ಕಮಿಷನ್ ಪಡೆಯುತ್ತಿರುವ ಹಾಗೂ ಸರ್ಕಾರದ ಸವಲತ್ತು ಇಲ್ಲವೇ ಬೇರೆ ಬೇರೆ ಕಾರಣಕ್ಕೆ ಉದ್ದಿಮೆ ಪರವಾನಿಗೆ (ಟ್ರೇಡ್ ಲೈಸೆನ್ಸ್) ಪಡೆದಿರುವ ದೂರುಗಳಿವೆ. ಅಂಥ ಪರವಾನಿಗೆಗಳನ್ನು ಗುರುತಿಸಿ ರದ್ದುಪಡಿಸಬೇಕು. 10 ವರ್ಷಕ್ಕೆ ನೀಡುತ್ತಿದ್ದ ಪರವಾನಿಗೆಯನ್ನು 05 ವರ್ಷಕ್ಕೆ ನೀಡುವಂತೆ ಸೂಚಿಸಿದರು. ಇಲಾಖೆಯ ಕಚೇರಿಯಲ್ಲಿ ಕೆಲ ಅಧಿಕಾರಿಗಳು 20 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆಗೆ ಶಿಫಾರಸ್ಸು ಮಾಡಬೇಕು ಎಂದರು.

ಬಳ್ಳಾರಿ ಎಪಿಎಂಸಿ ವಾರ್ಷಿಕ ಆದಾಯವು ಕುಸಿದಿದ್ದು, ಹೆಚ್ಚಿನ ಆದಾಯ ನಿರೀಕ್ಷೆಗೆ ಕ್ರಮ ವಹಿಸಬೇಕು. ಎಪಿಎಂಸಿಗೆ ಸೂಕ್ತ ನಿರ್ವಹಣೆ ಇಲ್ಲ. ರಸ್ತೆಗಳು ಧೂಳಿನಿಂದ ಕೂಡಿವೆ. ಎಪಿಎಂಸಿಗೆ ಹಲವಾರು ಕಡೆ ದಾರಿಗಳಿವೆ. ಒಳಗಡೆ ಆವರಣದಲ್ಲಿ ಗುಣಮಟ್ಟ ಡಾಂಬರು ರಸ್ತೆ, ಸಿಸಿಟಿವಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಬಳಿಕ ಎಪಿಎಂಸಿಯ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಾತಿ ವಿವರ, ಎಪಿಎಂಸಿ ಆದಾಯ ವಿವರಗಳನ್ನು ಕುಲಂಕುಷವಾಗಿ ಪರಿಶೀಲಿಸಿದರು.