ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಅಶೋಕ್, ಸುಧಾ ಈರೇಶ್, ಧರ್ಮಪ್ಪ ಇದ್ದರು.  
ಜಿಲ್ಲೆ

ಪಶು ಸಂಗೋಪನೆ, ಕೃಷಿ ಮೇಳ ನಡೆಯುವಂತಾಗಲಿ

ಶನಿವಾರಸಂತೆ: ಜಾನುವಾರುಗಳ ವೃದ್ಧಿಗಾಗಿ ಪಶು ಸಂಗೋಪನೆ ಮತ್ತು ಕೃಷಿ ಮೇಳ ನಡೆಸುವುದರಿಂದ ಜಾನುವಾರುಗಳ ಜಾತ್ರೆಯ ಹಿಂದಿನ ವೈಭವವನ್ನು ಮತ್ತೆ ಮರುಕಳಿಸಲು ಸಾಧ್ಯ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರೈತರು ಜಾನುವಾರುಗಳನ್ನು ಸಾಕುವುದು ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗುಡುಗಳಲೆ ಜಾನುವಾರುಗಳ ಜಾತ್ರೆ ಮಾದರಿಯಾಗಿದ್ದು, ಮುಂದಿನ ದಿನದಲ್ಲಿ ಪಶುಸಂಗೋಪನಾ ಮತ್ತು ಕೃಷಿಮೇಳವನ್ನು ನಡೆಸುವಂತೆ ಜಾತ್ರಾ ಸಮಿತಿಗೆ ಸಲಹೆ ನೀಡಿದರು.

ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಗೆ ಮತ್ತಷ್ಟಯ ಶಕ್ತಿ ನೀಡುವ ದೃಷ್ಟಿಯಿಂದ ಜಾತ್ರಾ ಸಮಿತಿಗೆ ಅಗತ್ಯ ಸಹಕಾರ ನೀಡಲಾಗುವುದು. ಜಾತ್ರಾ ಮೈದಾನದ ಅಭಿವೃದ್ಧಿ, ಜಾತ್ರಾ ಮೈದಾನದಲ್ಲಿರುವ ದೇವಸ್ಥಾನಕ್ಕೆ ರಸ್ತೆ ಮುಂತಾದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜಾತ್ರೆಗಳು ಸಂಸ್ಕೃತಿ, ಜಾನಪದ ಸೊಗಡಿನ ಪ್ರತೀಕವಾಗಿದ್ದು, ಇವುಗಳಲ್ಲವೂ ಧರ್ಮದ ತಳಹದಿಯಲ್ಲಿ ನಡೆಯುತ್ತದೆ. ಪ್ರಸ್ತುತ ಸಮಾಜ ವೈಜ್ಞಾನಿಕವಾಗಿ ಬದಲಾಗುತ್ತಿರುವ ರೀತಿಯಲ್ಲಿ ಜಾತ್ರೋತ್ಸವಗಳೂ ಸಹ ಸಹಜವಾಗಿ ಬದಲಾವಣೆಯಾಗುತ್ತಿದೆ. ಗುಡುಗಳಲೆ ಜಾನುವಾರುಗಳ ಜಾತ್ರೆ ಈಗ ಬದಲಾವಣೆ ಕಾಣುತ್ತಿದ್ದರೂ ಸಾಂಸ್ಕೃತಿಕ, ಆಧುನಿಕತೆಯ ಲೇಪದೊಂದಿಗೆ ಜಾತ್ರೆ ನಡೆಸಿಕೊಂಡು ಬರುತ್ತಿರುವುದು ಮಾದರಿ ಎಂದರು.

ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಮುಂದಿನ ಪೀಳಿಗೆಗೆ ಜಾತ್ರಾ ಮೈದಾನವನ್ನು ಹಸಿರು ವಾತಾವರಣವನ್ನಾಗಿ ಸೃಷ್ಟಿಸಬೇಕು. ಇದು ಸಾಧ್ಯವಾಗಬೇಕಾದರೆ ಹೆಚ್ಚಾಗಿ ಗಿಡಗಳನ್ನು ಬೆಳೆಸುವಂತಾಗಬೇಕು. ಆ ಮೂಲಕ ಜಾತ್ರೆಗೆ ಬರುವ ಜನರಿಗೆ ಆಹ್ಲಾದಕರ ವಾತಾವರಣ ಸಿಗುವಂತೆ ಮಾಡಬೇಕು ಎಂದರು.

ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆ ಕಮ್ಮಿಯಾಗುತ್ತಿದ್ದು, ಜಾತ್ರಾ ಸಮಿತಿಯವರು ಮುಂದಿನ ದಿನದಲ್ಲಿ ದೇವಸ್ಥಾನದಲ್ಲಿ ರಥೋತ್ಸವ ಮುಂತಾದ ಧಾರ್ಮಿಕ ಮತ್ತು ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ತಾ.ಪಂ. ಮಾಜಿ ಸದಸ್ಯ ಕುಶಾಲಪ್ಪ ಮಾತನಾಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಸ್.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಈರೇಶ್, ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಆಹಮದ್, ನಿಡ್ತ ಗ್ರಾಪಂ ಅಧ್ಯಕ್ಷ ಮನು, ಪ್ರಮುಖರಾದ ಪೂರ್ಣಿಮಾ ಕಿರಣ್, ಶರತ್ ಶೇಖರ್, ಪುನೀತ್ ತಾಳೂರು, ಜಾತ್ರಾ ಸಮಿತಿ ಉಪಾಧ್ಯಕ್ಷೆ ಚೈತ್ರಾ, ಕಾರ್ಯದರ್ಶಿ ವೀರೇಂದ್ರಕುಮಾರ್ ಇತರರಿದ್ದರು. ಜಾತ್ರೆಗೆ ಹಳ್ಳಿಕಾರ್ ಎತ್ತುಗಳನ್ನು ತಂದು ಜಾತ್ರೆಗೆ ಕಳೆ ತಂದುಕೊಟ್ಟ ಚನ್ನರಾಯಪಟ್ಟಣದ ಹಳ್ಳಿಕಾರ್ ಎತ್ತುಗಳ ಮಾಲೀಕರನ್ನು ಇದೇ ವೇಳೆ ಜಾತ್ರಾ ಸಮಿತಿಯಿಂದ ಸನ್ಮಾನಿಸಲಾಯಿತು.