ಜಿಲ್ಲೆ

ಅಂಗನವಾಡಿ ಕಲಿಕೆಗೆ ಪೂರಕವಾಗಿರಲಿ

ತುಮಕೂರು ಡೆಸ್ಕ್

ಪಾವಗಡ: ಅಂಗನವಾಡಿ ಕೇಂದ್ರಗಳು ಕೇವಲ ಪೋಷಣೆ ಕೇಂದ್ರವಾಗದೇ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಕೇಂದ್ರಗಳಾಗಿ ಪರಿವರ್ತನೆಯಾಗಬೇಕು ಎಂದು ಸಿಡಿಪಿಒ ಸುನಿತಾ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಂಡಿದ್ದ ಪೋಷನ್​ ಭಿ ಪಡಾಯಿ ಭಿ ಯೋಜನೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಯೋಜನೆಯಡಿಯಲ್ಲಿ ಆರು ವರ್ಷದೊಳಗಿನ ಮಕ್ಕಳ ಪೌಷ್ಟಿಕಾಂಶದ ಜತೆಗೆ ಆರಂಭಿಕ ಬಾಲ್ಯದ ಶಿಕ್ಷಣ ಮತ್ತು ಆರೈಕೆಯನ್ನು ಸುಧಾರಿಸುವ ಗುರಿ ಹೊಂದಿದೆ. ಯೋಜನೆಯು ಅಂಗನವಾಡಿ ಕಾರ್ಯಕರ್ತರ ಕೌಶಲವನ್ನು ಹೆಚ್ಚಿಸುತ್ತದೆ ಮತ್ತು ಅಂಗನವಾಡಿಗಳಲ್ಲಿ ಆಟದ ಉಪಕರಣಗಳು, ಉತ್ತಮ ಮೂಲಸೌಕರ್ಯ ಒದಗಿಸುತ್ತದೆ. ಮಕ್ಕಳ ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಎಂದರು ತಿಳಿಸಿದರು.

ಶಾಲಾ ಪೂರ್ವ ಶಿಕ್ಷಣ, ಶಾಲಾ ಪೂರ್ವ ಚಟುವಟಿಕೆಗಳು ಪೌಷ್ಟಿಕಾಂಶ ಮತ್ತು ಅಂಗವಿಕಲ ಮಕ್ಕಳ ಆರೈಕೆ ಮತ್ತು ಹಾರೈಕೆದಾರರ ತರಬೇತಿಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ದಿನಗಳ ಕಾಲ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.