ವಿಜಯಪುರ: ಪಟ್ಟಣ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡು ಹಲವು ತಿಂಗಳೇ ಕಳೆದರೂ ಈವರೆಗೂ ಚುನಾವಣೆ ಪ್ರಕ್ರಿಯೆ ನಡೆಯದಿರುವುದು ಸದಸ್ಯರು ಹಾಗೂ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಬಾರಿಗೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಎ) ಮಹಿಳೆಗೆ ಮೀಸಲು ಪ್ರಕಟಿಸಲಾಗಿದೆಯಾದರೂ ಚುನಾವಣೆಗೆ ದಿನಾಂಕ ಗೊತ್ತುಪಡಿಸಬೇಕಾಗಿರುವ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿಯವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಇಲ್ಲಿನ ಅಧಿಕಾರಿಗಳು
ಕೂಡಾ ಪ್ರತಿ ಬಾರಿ ಕಡತಗಳನ್ನು ದೊಡ್ಡಬಳ್ಳಾಪುರಕ್ಕೆ ಹೊತ್ತೊಯ್ಯಬೇಕಾದ ಅನಿವಾರ್ಯತೆ ಮುಂದುವರಿದಿದೆ.
ಅಧ್ಯಕ್ಷ, ಉಪಾಧ್ಯಕ್ಷರಿಲ್ಲದ ಕಾರಣ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಯಾವುದೇ ನಿರ್ಣಯಗಳು
ಸದಸ್ಯರ ಗಮನಕ್ಕೆ ಬರುತ್ತಿಲ್ಲ. ವಾರ್ಡುಗಳಲ್ಲಿ
ನಡೆಯುವಂತಹ ಕಾಮಗಾರಿಗಳ ಕುರಿತು ಸ್ಥಳೀಯ
ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ.
ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಬಜೆಟ್ ಸಿದ್ಧತೆ ಸೇರಿ ಪ್ರಮುಖ ನಿರ್ಣಯ ಕೈಗೊಳ್ಳುವಾಗ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಮಾಡಬೇಕು. ಸ್ಥಳೀಯವಾಗಿ ಜನರು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಜನ ನಮ್ಮನ್ನೂ ಪ್ರಶ್ನೆ ಮಾಡುತ್ತಾರೆ. ನಾವು ಅವರಿಗೆ ಏನೆಂದು ಉತ್ತರಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಸದಸ್ಯ ವಿ.ನಂದಕುಮಾರ್ ಬೇಸರ ವ್ಯಕ್ತಪಡಿಸಿದರು.ಅವಧಿ ಮುಗಿಸುವ ಹುನ್ನಾರ?: ನ್ಯಾಯಾಲಯದ ತಡೆಯಾಜ್ಞೆ ತೆರವಾಗಿದ್ದರೂ ವಿಜಯಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಪಡಿಸಲು ಅಧಿಕಾರಿಗಳು ಏಕೆ ಮೀನಮೇಷ ಎಣಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಈ ಮೊದಲು ಕೂಡಾ ಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷರಿಲ್ಲದೆ ಅವಧಿ ಪೂರ್ಣಗೊಂಡಿತ್ತು. ಈಗಲೂ ಇದೇ ಸ್ಥಿತಿ ಮುಂದುವರಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಜೆಡಿಎಸ್ ಸದಸ್ಯರದ್ದೇ ಮೇಲುಗೈ: ಪುರಸಭೆಯ ಒಟ್ಟು 23 ಮಂದಿ ಸದಸ್ಯರ ಬಲಾಬದಲ್ಲಿ 13 ಮಂದಿ ಜೆಡಿಎಸ್, 7 ಮಂದಿ ಕಾಂಗ್ರೆಸ್, 2 ಪಕ್ಷೇತರ, 1 ಬಿಜೆಪಿ ಸದಸ್ಯರು ಇದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷಗಳಲ್ಲಿನ ಮಹಿಳಾ ಸದಸ್ಯರು ಉತ್ಸುಕರಾಗಿದ್ದು, ದಿನಾಂಕ ಗೊತ್ತುಪಡಿಸಿದರೆ, ನಂತರ ಚಿತ್ರಣ ಏನಾಗಬಹುದು ಎಂಬುದು ಮಾತ್ರ ಊಹೆ ಮೀರಿದ್ದು ಎಂಬ ಮಾತುಗಳು ರಾಜಕೀಯ ಮೊಗಸಾಲೆಯಲ್ಲಿ ಹರಿದಾಡುತ್ತಿವೆ.