ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಮಾತ್ರವಲ್ಲದೆ ಹಿಂದಿ ಭಾಷೆಯ ನಾಟಕವನ್ನು ರಂಗಾಯಣ ಸಿದ್ಧಪಡಿಸುತ್ತಿರುವುದು ಹೆಮ್ಮೆಯ ಸಂಗತಿ. ಇದೇ ರೀತಿ ಇನ್ನೂ ಬೇರೆ ಭಾಷೆಯ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಬೇಕು ಎಂದು ರಂಗ ನಿರ್ದೇಶಕ ನರೇಂದ್ರ ಸಾಚರ ಹೇಳಿದರು.
ನಗರದ ರಂಗಾಯಣದ ಪಂ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ರಂಗಾಯಣ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಧಾರವಾಡ ವಿದ್ಯಾಕಾಶಿ ಎಂದೇ ಪ್ರಸಿದ್ಧವಾಗಿದೆ. ಆದ್ದರಿಂದ ರಂಗಾಯಣವು ಬೇರೆ ಭಾಷೆಯ ನಾಟಕಗಳಿಗೂ ಆದ್ಯತೆ ನೀಡುವ ಮೂಲಕ ನೋಡುಗರಿಗೆ ವಿಭಿನ್ನ ಭಾಷೆ, ಆಚಾರ-ವಿಚಾರ ಸೇರಿ ಹಲವಾರು ಮಾಹಿತಿಗಳ ಜತೆಗೆ ಮನರಂಜನೆ ನೀಡಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಮಾತನಾಡಿ, ರಂಗಾಯಣವು ಆಯೋಜಿಸಿದ್ದ 4 ದಿನದ ರಂಗಾಯಣ ನಾಟಕೋತ್ಸವದ ಯಶಸ್ಸಿಗೆ ಎಲ್ಲ ರಂಗಾಸಕ್ತರು, ಸಾಹಿತಿಗಳು ಉತ್ತಮ ಸಹಕಾರ ನೀಡಿದ್ದಾರೆ. ಇದೇ ರೀತಿ ಕಲೆಗೆ ಪ್ರೋತ್ಸಾಹ ನೀಡುವುದರಿಂದ ರಂಗಾಯಣ ಇನ್ನೂ ಹಲವಾರು ನಾಟಕೋತ್ಸವಗಳನ್ನು ಆಯೋಜಿಸಲು ಪ್ರೇರಣೆ ನೀಡಬೇಕು ಎಂದರು.
ರಂಗ ನಿರ್ದೇಶಕರಾದ ಮಾಯಾ ರಾವ್, ಪಾಂಡುರಂಗ ಮಸಾಲೆ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಇತರರು ಇದ್ದರು. ನಂತರ ಜೋಕುಮಾರ ಸ್ವಾಮಿ ನಾಟಕ ಪ್ರಸ್ತುತ ಪಡಿಸಲಾಯಿತು.