ಜಿಲ್ಲೆ

ಎಲ್ಲ ಜಾತಿ, ಧರ್ಮ ಒಗ್ಗೂಡಿ ನಡೆಯಲಿ

ಪ್ರಸಿನ್ ಕೆ.ಆರ್

ಕೊಳ್ಳೇಗಾಲ: ಸಂವಿಧಾನ ಜಾರಿಯಾಗಿ 75ವರ್ಷ ಪೂರ್ಣಗೊಂಡರೂ, ನಾವೆಲ್ಲರೂ ಭಾರತೀಯರು, ಒಂದೇ ಎಂಬ ಮನೋಭಾವನೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ನ್ಯಾಷನಲ್ ಶಾಲೆಯ ಮೈದಾನದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದ ಬೃಹತ್ ಸಂವಿಧಾನದ ಬಗ್ಗೆ ಇಡೀ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಎಲ್ಲ ಧರ್ಮ, ಜಾತಿ, ವರ್ಗದ ಜನರಿಗೂ ರಕ್ಷಣಾ ಕವಚವಾಗಿದೆ. ನಾವೆಲ್ಲರೂ ಮನುಷ್ಯತ್ವದಿಂದ ಬದುಕ ಬೇಕಿದೆ. ಎಲ್ಲ ಜಾತಿ, ಧರ್ಮವೂ ಒಗ್ಗೂಡಿ ನಡೆಯಬೇಕಿದೆ. ಮನುಷ್ಯ ಮನುಷ್ಯನನ್ನೆ ದ್ವೇಷಿಸುವುದನ್ನು ಬಿಡಬೇಕಿದೆ ಎಂದರು.

ಸದೃಢ ದೇಶ ನಿರ್ಮಾಣಕ್ಕೆ ಸಂವಿಧಾನ ಆಶಯಗಳು ಜಾರಿಯಾಗಬೇಕಿದೆ. ಸ್ವಾತಂತ್ರೃ, ಸಹಬಾಳ್ವೆ, ಭಾತೃತ್ವ, ಸಮಾನತೆ ಸಾಧಿಸಬೇಕು. ಸಂವಿಧಾನ ಜಾರಿ ಬಳಿಕ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಇಲ್ಲಿ ಪ್ರಜೆಗಳೆ ಪ್ರಭುಗಳಾಗಿದ್ದಾರೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನಮಗೆಲ್ಲ ಶ್ರೀರಕ್ಷೆಯಾಗಿದೆ. ಭಾರತ ಮಾತೆಯ ರಕ್ಷಣೆಗೆ ನಾವೆಲ್ಲರು ನಿಲ್ಲಬೇಕು ಎಂದು ಹೇಳಿದರು.

ದ್ವಜಾರೋಹಣ: ಬೆಳಗ್ಗೆ 9 ಗಂಟೆಗೆ ಉಪವಿಭಾಗಾಧಿಕಾರಿ ಮಹೇಶ್ ಧ್ವಜಾರೋಹಣ ನೆರವೇರಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಜೀ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಬಳಿಕ ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳು ಆಕರ್ಷಕವಾಗಿ ಪಥ ಸಂಚಲನ ನಡೆಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಸರ್ಕಾರಿ ಎಂಜಿಎಸ್‌ವಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಎಸ್.ಶಂಕುತಲ ಗಣರಾಜ್ಯೋತ್ಸವ ಕುರಿತು ಮಾತನಾಡಿದರು.

ವಿವಿಧ ಕ್ರೀಡೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಂಗವಿಕಲ ಮಕ್ಕಳಾದ ಜಗನ್, ಪ್ರತಾಪ್, ಜನಾರ್ಧನ್ ಹಾಗೂ ಅಭಿಜಿತ್ ನಾಯಕ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಶಿವಕುಮಾರ್ ಅವರಿಗೆ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷರಾದ ರೇಖಾರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಮೋಳೆ, ತಹಸೀಲ್ದಾರ್ ಬಸವರಾಜು, ಬಿಇಒ ಮಂಜುಳಾ, ಸಿಪಿಐ ಶಿವಮಾದಯ್ಯ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಯೋಧ ಶಿವಕುಮಾರ್ ಇತರರಿದ್ದರು.