ಬೆಂಗಳೂರು ಹವಾಮಾನ ವೈಪರೀತ್ಯದಿಂದ ಹಲವು ನಗರ ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ. ಗ್ರಾಮೀಣ ಪ್ರದೇಶಗಳಿಗೂ ಇದರ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಯಂತಹ ತಂತ್ರಜ್ಞಾನ ಬಳಸಿಕೊಂಡು ಸುಸ್ಥಿರ ಪರಿಸರ ಕಾಪಾಡುವತ್ತ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕಿದೆ ಎಂದು ಕರ್ನಾಟಕ ನವೋದ್ಯಮ ವಿಷನ್ ಗ್ರೂಪ್‌ನ ಅಧ್ಯಕ್ಷ ಡಾ. ಪ್ರಶಾಂತ್ ಪ್ರಕಾಶ್ ತಿಳಿಸಿದರು.
ಆರ್‌ವಿ ಪಿಯು ಕಾಲೇಜು 17ನೇ ಬ್ಯಾಚ್ ಉದ್ಘಾಟನೆ ಮತ್ತು 2024ರ ಪಿಯು ಮಂಡಳಿ ಪರೀಕ್ಷೆ, ಸಿಇಟಿ ಮತ್ತು ನೀಟ್‌ನಲ್ಲಿ ಉತ್ತಮ ರ‌್ಯಾಂಕ್ ಪಡೆದಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೂರದೃಷ್ಟಿ ಮತ್ತು ಉದ್ದೇಶವಿಲ್ಲದ ಜೀವನ ಅರ್ಥವಿಲ್ಲ. ಉದ್ಯಮಶೀಲ ಮನಸ್ಥಿತಿ ಬಹಳ ಮುಖ್ಯವಾಗಲಿದೆ. ಇಂತಹ ಸಮಯದಲ್ಲಿ ವೈದ್ಯಕೀಯ, ತಂತ್ರಜ್ಞಾನ, ಕೃಷಿ ಸೇರಿ ಪ್ರತಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯಾಗಿದೆ. ಮೊಬೈಲ್ ತಂತ್ರಜ್ಞಾನವು ಕೂಡ ದಶಕಗಳ ಹಿಂದೆ ಗೊತ್ತಿರಲಿಲ್ಲ, ಇಂದು ಸಾಮಾನ್ಯವಾಗಿದೆ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಪ್ರಸ್ತುತತೆ ಕಾಯ್ದುಕೊಳ್ಳಲು ಮುಂದಿನ ತಲೆಮಾರನ್ನು ಗಮನದಲ್ಲಿಕೊಂಡು ಚಿಂತನೆ ಮಾಡಬೇಕಿದೆ ಎಂದರು.
ಎಐನಿಂದ ಎಲ್ಲವೂ ಸಾಧ್ಯವಿಲ್ಲ:
ಪ್ರತಿ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆಯೇ (ಎಐ) ಆವರಿಸಿಕೊಂಡಿರುವ ಪರಿಣಾಮ ನೌಕರರ ಪರಿಸ್ಥಿತಿ ಮುಂದೇನು? ಎಂಬ ಚಿಂತೆ ನಿರ್ಮಾಣವಾಗುತ್ತಿದೆ. ಆದರೆ, ಎಐ ಯಂತ್ರವಾಗಿದ್ದು, ನಿರ್ದಿಷ್ಟ ಸಮಸ್ಯೆಗಳನ್ನು ಮಾತ್ರ ಬಗೆಹರಿಸಲಿದೆ. ಸಾಮಾಜಿಕ, ಭಾವನಾತ್ಮಕ ಕೌಶಲಗಳು ತಿಳಿದಿಲ್ಲ. ಅಂತಹ ಕೌಶಲಗಳನ್ನು ಅಳವಡಿಸಿಕೊಂಡಾಗ ಉದ್ಯೋಗಸ್ಥರಿಗೆ ಬೇಡಿಕೆ ಬರಲಿದೆ. ಎಐ ಮಾಡದ ಕೆಲಸವನ್ನು ಮಾಡುವುದು, ಗುಣಮಟ್ಟದ ಉತ್ಪನ್ನಗಳ ಉತ್ಪಾದನೆ ಮಾಡಿದಾಗ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ರಾಷ್ಟ್ರವನ್ನು ಅಭಿವೃದ್ಧಿಗೊಳಿಸುವ ಮನಸ್ಥಿತಿಯು ಅನನ್ಯ ಮತ್ತು ವಿಶೇಷವಾದುದು. ಆರೋಗ್ಯ, ಶುಚಿತ್ವ ಮತ್ತು ಮೂಲಸೌಲಭ್ಯಗಳು ಕ್ಷೇತ್ರದಲ್ಲಿ ಪ್ರಸ್ತುತತೆಗೆ ಹೊಂದಿಕೊಳ್ಳುವ, ಕ್ರಿಯಾಶೀಲ ಮತ್ತು ಆಶಾದಾಯಕ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬೇಸ್ ಎಜುಕೇಷನಲ್ ಸಿಇಒ ಅನಂತ ಕುಲಕರ್ಣಿ ಮಾತನಾಡಿ, ತಮ್ಮ ಜಾತಕದಲ್ಲಿ ವೈದ್ಯ, ಇಂಜಿನಿಯರ್ ಆಗುವ ಯೊಗವಿದೆ ಎಂದು ಮನೆಯಲ್ಲಿ ಮುಸುಕು ಹಾಕಿ ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪಿಯುಸಿ ಆರಂಭದಿಂದ 2 ವರ್ಷಗಳ ಕಾಲ ಕಠಿಣ ಪರಿಶ್ರಮ, ಬದ್ಧತೆ ಹೊಂದಿದಾಗ ಸಾಧಕರಾಗಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್‌ವಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎವಿಎಸ್ ಮೂರ್ತಿ, ಆರ್‌ವಿ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಗುರುದತ್ ಮತ್ತು ಪ್ರಾಂಶುಪಾಲ ತೇಜಸ್ ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸೋಲೇ ಗೆಲುವಿನ ಮೆಟ್ಟಿಲು. ಕಲಿಕೆಯ ಹಸಿವಿದ್ದಾಗ ಸಾಧನೆ ಸಾಧ್ಯವಾಗಲಿದೆ. ಕಲಿಕೆ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಕಲಿಕೆ ಪರಿಪೂರ್ಣವೆನಿಸಲಿದೆ. ಇಂತಹ ಕಲಿಕೆಗೆ ಆರ್‌ವಿ ಶಿಕ್ಷಣ ಸಂಸ್ಥೆಯು ಬದ್ಧತೆ ಹೊಂದಿದೆ. - ಡಾ. ಎಂ.ಪಿ. ಶ್ಯಾಮ್, ಆರ್.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ