ಮೈಸೂರು: ರೈತರು ಕೃಷಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ನಿರ್ದೇಶಕ(ನಿರ್ವಹಣೆ ಮತ್ತು ವಿಶ್ಲೇಷಣೆ) ಡಾ.ಕೆ.ಸಿ.ಗೊಮ್ಮಗೋಳ ಮಠ ಹೇಳಿದರು.
ರೇಡಿಯೋ ಕಿಸಾನ್ ದಿನದ ಅಂಗವಾಗಿ ಪ್ರಸಾರ ಭಾರತಿ, ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ ಇಲಾಖೆ, ಮೈಸೂರು ಆಕಾಶವಾಣಿ ಸಹಯೋಗದಲ್ಲಿ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೃಷಿ ಪ್ರವಾಸೋದ್ಯಮ’ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೃಷಿ ಪ್ರವಾಸೋದ್ಯಮ ಹೊಸದಲ್ಲ. ಅದು ಈ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಕೃಷಿಕರು ಮತ್ತೊಬ್ಬರ ಜಮೀನುಗಳಿಗೆ ಹೋಗಿ ಪರಿಶೀಲಿಸುವುದು, ಯಶಸ್ವಿ ಕೃಷಿಕರ ಮಾರ್ಗದರ್ಶನ ಪಡೆಯುವುದು, ಕ್ಷೇತ್ರ ಪ್ರವಾಸ ಕೈಗೊಳ್ಳುವ ಮೂಲಕ ಕೃಷಿ ಪ್ರವಾಸೋದ್ಯಮ ಮುಂದುವರಿಸಿಕೊಂಡು ಬಂದಿದ್ದಾರೆ. ಆದರೀಗ, 10 ಸಾವಿರ ವರ್ಷ ಹಿಂದಿನ ಕಸುಬಾಗಿರುವ ಕೃಷಿಯನ್ನು ಹೇಗೆ ಲಾಭದಾಯಕ ಮಾಡಬೇಕು ಎಂಬುದು ಈಗಿನ ಸವಾಲು ಎಂದರು.
ಭೂಮಿ, ಚಂದ್ರ ಇರುವವರೆಗೂ ಕೃಷಿ ಇರುತ್ತದೆ. ಆದರೆ, ಉಳಿದ ಕ್ಷೇತ್ರಗಳ ಅಳಿವು-ಉಳಿವು ಗೊತ್ತಿಲ್ಲ. ಸ್ವಾತಂತ್ರೃ ಬಳಿಕ ಕೃಷಿಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ಇದಕ್ಕೆ ರೈತರೇ ಪ್ರಮುಖ ಕಾರಣ. ಲಾಭ-ನಷ್ಟಗಳು ಏನಾದರೂ ಕೃಷಿ ಬಿಡಲಿಲ್ಲ. ಭೂತಾಯಿ ಕಾಯಕವನ್ನು ರೈತರು ಮುಂದುವರಿಸಿಕೊಂಡು ಬಂದಿದ್ದಾರೆ. ದೇಶದ 143 ಕೋಟಿ ಜನಸಂಖ್ಯೆಗೆ ಆಹಾರ ಪೂರೈಕೆಯನ್ನು ರೈತರು ಮಾಡುತ್ತಿರುವುದು ಸಾಮಾನ್ಯ ಕೆಲಸವಲ್ಲ ಎಂದರು.
ಆರ್ಥಿಕ ನಷ್ಟವಾದರೆ ಯಾರೂ ಅದೇ ಕ್ಷೇತ್ರದಲ್ಲಿ ಮುಂದುವರಿಯಲ್ಲ. ಅದನ್ನು ಬಿಟ್ಟು, ಮತ್ತೊಂದು ಕ್ಷೇತ್ರಕ್ಕೆ ಹೋಗುತ್ತಾರೆ. ಆದರೆ, ರೈತರು ಮಾತ್ರ ನಷ್ಟ ಅನುಭವಿಸಿದರೂ ಅದೇ ಕೃಷಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಎಂದರು.
ಮೈಸೂರು ಆಕಾಶವಾಣಿ ಮುಖ್ಯಸ್ಥ ಎಸ್.ಎಸ್.ಉಮೇಶ್ ಮಾತನಾಡಿ, ಕೃಷಿ ಪ್ರವಾಸೋದ್ಯಮದ ಮೂಲಕ ಮಕ್ಕಳು, ಜನರನ್ನು ತಮ್ಮ ಕೃಷಿ ಕ್ಷೇತ್ರದತ್ತ ಆಕರ್ಷಿಸಬೇಕು. ಇದಕ್ಕೆ ಪ್ರವೇಶ ದರ ನಿಗದಿಪಡಿಸಿ ಆರ್ಥಿಕ ಸಂಪನ್ಮೂಲ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಈಗಿನ ಬಹಳಷ್ಟು ಮಕ್ಕಳಿಗೆ ಕೃಷಿ ಕುರಿತು ತಿಳಿದಿಲ್ಲ. ಬೇಸಾಯ, ಬಿತ್ತನೆ, ಕೃಷಿ ಉಪಕರಣಗಳು, ಸಲಕರಣೆ ಬಗ್ಗೆಯೂ ಗೊತ್ತಿಲ್ಲ. ಆದ್ದರಿಂದ ಕೃಷಿ ಪ್ರವಾಸೋದ್ಯಮದ ಮೂಲಕ ಇವರಿಗೆ ಜಾಗೃತಿ ಮೂಡಿಸಬೇಕು. ಜತೆಗೆ, ಕೆಲ ಕಾಲ ತಮ್ಮ ಹೊಲದಲ್ಲಿ ಕೆಲಸ ಮಾಡಲು ಅವಕಾಶವನ್ನೂ ಕಲ್ಪಿಸಬೇಕು. ಈ ರೀತಿಯ ಪ್ರಯೋಗದಿಂದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬಹುದು. ವಾಣಿಜ್ಯ ಭೂಮಿಯಾಗಿ ಪರಿವರ್ತನೆಯಾಗುವುದನ್ನೂ ತಡೆಯಬಹುದು ಎಂದರು.
ಪ್ರತಿ ವರ್ಷ ಫೆಬ್ರವರಿ 15ರಂದು ರೈತರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 96 ಆಕಾಶವಾಣಿ ಕೇಂದ್ರಗಳಿಂದಲೂ ಕೃಷಿರಂಗ ಬಾನುಲಿ ಕಾರ್ಯಕ್ರಮದ ಮೂಲಕ ಕೃಷಿಗೆ ಸಂಬಂಧಿತ ಮಾಹಿತಿ ನೀಡಲಾಗುತ್ತಿದೆ ಎಂದರು.
ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ರೈತರ ಕೊಡುಗೆ ಅಸ್ಮರಣೀಯ. ಅವರು ಬೆಳೆಯುವ ಹಣ್ಣು, ತರಕಾರಿ, ದವಸಧಾನ್ಯಗಳನ್ನೇ ತಿನ್ನಬೇಕು. ಎಷ್ಟೇ ದುಡ್ಡಿದ್ದರೂ ಅದನ್ನು ತಿನ್ನಲು ಆಗಲ್ಲ. ಹೀಗಾಗಿ, ಕೃಷಿಕರಿಲ್ಲದೆ ಉಳಿದವರು ಬದುಕಲು ಸಾಧ್ಯವಿಲ್ಲ. ಹೀಗಾಗಿಯೇ, ರೈತರನ್ನು ಅನ್ನದಾತರು ಎಂದು ಬಣ್ಣಿಸಲಾಗುತ್ತದೆ. ಆದ್ದರಿಂದ ರೈತರ ಕುರಿತು ಕಾಳಜಿ ತೋರಬೇಕಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಮ್ಮನ ಪ್ರಕೃತಿ ಮಡಿಲು ಸಂಸ್ಥೆಯ ಎ.ಎಸ್.ಮಹೇಶ್, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಿಗುರು ಎಕೋ ಸ್ಪೇಸ್‌ನ ಶ್ರೀವತ್ಸ ಗೋವಿಂದರಾಜು ವಿಷಯ ಮಂಡಿಸಿದರು. ಕರಾಮುವಿ ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪ್ರಸಾರಾಂಗದ ಸಂಚಾಲಕ ಡಾ.ಆರ್.ಸಂತೋಷ್ ನಾಯ್ಕ, ಇಂಜಿನಿಯರಿಂಗ್ ವಿಭಾಗದ ಆರ್.ಶ್ರೀನಿವಾಸ್ ಮೂರ್ತಿ ಇನ್ನಿತರರಿದ್ದರು.