ಜಿಲ್ಲೆ

ಎತ್ತರದ ಮನೆಗಿಂತ ಹತ್ತಿರದ ಮನಸು ಕಟ್ಟಲಿ

ಬ್ಯಾಡಗಿ: ಭಗವಂತ ಕೊಟ್ಟಿರುವುದನ್ನು ಅನುಭವಿಸಿ ತೃಪ್ತಿ ಪಡಬೇಕೇ ಹೊರತು, ಸಂಪತ್ತು ಗಳಿಸುವ ಹೋರಾಟದ ಬೆನ್ನು ಬಿದ್ದು, ತೀವ್ರ ಒತ್ತಡಕ್ಕೆ ಸಿಲುಕಿ ಆರೋಗ್ಯ ಮತ್ತು ಜೀವನ ಕಳೆದುಕೊಳ್ಳಬಾರದು ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.

ಇಲ್ಲಿನ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಬುಧವಾರ 7ನೇ ದಿನದ ಪ್ರವಚನ ನೀಡಿದರು. ಸದಾಚಾರ, ಸದ್ಭಾವ ತುಂಬಿದ ಮನಗಳಲ್ಲಿ ಪ್ರೀತಿ, ಪ್ರೇಮ, ಸಂತೋಷ ಉಕ್ಕಿರುತ್ತದೆ. ಎತ್ತರದ ಮನೆ ಕಟ್ಟುವುದಕ್ಕಿಂತ ಒಬ್ಬರಿಗೊಬ್ಬರು ಹತ್ತಿರವಿರುವ ಮನಸುಗಳನ್ನು ಕಟ್ಟಿಕೊಳ್ಳಿ. ಮನೆಯೆಂಬ ದೇವಾಲಯದಲ್ಲಿ ಪ್ರೇಮ, ತ್ಯಾಗ, ಕರುಣೆಗಳಿದ್ದಲ್ಲಿ ಶಾಂತಿ, ನೆಮ್ಮದಿ ತಾಣವಾಗಲಿದೆ. ಎಲ್ಲರೊಂದಿಗೆ ಬೆರೆಯುವ ಹಾಗೂ ಹಂಚಿಕೊಳ್ಳುವ ಭಾವ ಹೆಚ್ಚಾಗಬೇಕಿದೆ ಎಂದರು.

ಮಣ್ಣು ನಂಬಿ ಕೆಟ್ಟವರಿಲ್ಲ. ನಂಬಿದವರಿಗೆ ಚಿನ್ನ ಕೊಡುವ ಭಾಗ್ಯದೇವತೆ. ಆದರೆ, ಚಿನ್ನವನ್ನು ನಿಸರ್ಗ ಕೆಡಿಸಿ ಹುಡುಕಬಾರದು. ಭೂಮಿ ಯಾರಿಗೂ ಮೋಸ ಮಾಡಿಲ್ಲ, ನಾವು ಪೃಕೃತಿಗೆ ಮೋಸ ಮಾಡುವ ಮೂಲಕ ನಿಸರ್ಗದ ಜೀವಿಗಳನ್ನು ಹಿಂಸಿಸಿ, ಒತ್ತಾಯದಿಂದ ಪಶು ಪಕ್ಷಿ, ಪ್ರಾಣಿಗಳ ಹಕ್ಕುಗಳನ್ನು ಕಿತ್ತುಕೊಂಡು ಸುಖ ಪಡುತ್ತೇವೆ. ಮರ ಕಡಿದು, ಪೇಪರ್ ತಯಾರಿಸಿ ಆ ಖಾಲಿ ಹಾಳೆಯ ಮೇಲೆ ಕಾಡು ಬೆಳೆಸಿ ನಾಡು ಉಳಿಸಿ ಎನ್ನುತ್ತ ಸಾಗುತ್ತಿದ್ದೇವೆ. ನಾವು ಬರುವ ಮುನ್ನ, ನಮಗಿಂತ ಹಿಂದೆ ನಿರ್ಮಾಣವಾದ ನಿಸರ್ಗವನ್ನು ಸುಮ್ಮನೇ ಮುಟ್ಟದೆ ಬಿಟ್ಟರೂ ಜೀವನ ಸಾರ್ಥಕವಾಗಲಿದೆ. ಹಾಳು ಮಾಡುವ ಗುಣ, ಹಾಳಾದ ವಿಚಾರಗಳು ತಲೆಯಲ್ಲಿ ತುಂಬಿಕೊಂಡು ಸ್ವಾರ್ಥದಲ್ಲಿ ಮೆರೆಯುತ್ತಿರುವ ಮಾನವನ ಬದುಕು ಈಗ ದುಸ್ಥಿತಿ ತಲುಪಿದೆ. ಆರೋಗ್ಯ, ಆನಂದ, ಅಧ್ಯಾತ್ಮಗಳಲ್ಲಿ ಸಂತೃಪ್ತಿ ಕಾಣಬಹುದೆ ಹೊರತು, ಗಳಿಸಿದ ಸಂಪತ್ತು, ಹಣದಿಂದ ಸಾದ್ಯವಿಲ್ಲ ಎಂದರು.

ಬಡವನ ಪಾಲಿನ ದುಡ್ಡನ್ನು, ಅವನಿಗೆ ಸಿಗಬೇಕಾದ ಸೌಲಭ್ಯ, ಹಕ್ಕುಗಳನ್ನು ಸುಶೀಕ್ಷಿತರು ತಿನ್ನಲು ಹೊರಟರೆ ಯಾರು ಕ್ಷಮಿಸಬೇಕು..? ಅಕ್ಷರಸ್ಥರಿಂದಲೇ ತಪ್ಪುಗಳು, ಅಪರಾಧ ನಡೆದರೆ ತಿದ್ದುವವರು ಯಾರು..? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಸಾಧು ಸಜ್ಜನರ ವಾಣಿಗಳು, ಉತ್ತಮ ಪುಸ್ತಕ ಅಧ್ಯಯನ ಮಾಡುವ ಮೂಲಕ ಪರಿವರ್ತನೆಯಾಗಬೇಕಿದೆ. ಮರೆತು ನಡೆಯುವುದಕ್ಕಿಂತ ಅರಿತು ನಡೆಯುವುದು ಲೇಸು ಎಂದು ಸಂತರು ತಿಳಿಸಿದ್ದಾರೆ ಎಂದರು.

ಹೂವಿನ ಹಡಗಲಿ ಮಠದ ಡಾ.ಹಿರಿಶಾಂತ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು, ಸಂಗಣ್ಣ ಗಡಗಿ ಹಾಗೂ ಸೇವಾ ಸಮಿತಿ ಕಾರ್ಯಕರ್ತರು ಇದ್ದರು.