ಜಿಲ್ಲೆ

ಮೈಸೂರು ಜಿಲ್ಲೆ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಗೊಳ್ಳಲಿ: ಸಿಎಂ ಸೂಚನೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಇಡೀ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಸೂಚಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮಧ್ಯಾಹ್ನ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ದಸರಾ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿದರು.


ಅಧಿಕಾರಿಗಳಿಗೆ ಜನಪರವಾದ ಮನಸ್ಸು, ಕಾಳಜಿ, ಹೃದಯ ಇದ್ದರೆ ಮಾತ್ರ ಜನಪರ ಅಭಿವೃದ್ಧಿ ಸಾಧ್ಯ. ಕಳೆದ ಐದು ವರ್ಷಗಳಲ್ಲಿ ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹೀಗಾಗಿ, ಇಡೀ ಜಿಲ್ಲೆಯ ಅಭಿವೃದ್ಧಿಗೆ ನೀಲಿನಕ್ಷೆ ತಯಾರು ಮಾಡಬೇಕು ಎಂದು ತಿಳಿಸಿದರು.


ಅಭಿವೃದ್ಧಿಯ ವೈಭವ ಮರುಕಳಿಸಲಿ:


ಗತಕಾಲದ ಅಭಿವೃದ್ಧಿಯ ವೈಭವ ಮೈಸೂರಿನಲ್ಲಿ ಮರುಕಳಿಸಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ನೀರಾವರಿ, ಕೃಷಿ, ಸಮಾಜ ಕಲ್ಯಾಣ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳು ನಮಗೆ ಮಾದರಿಯಾಗಿವೆ. ಅವರ ಕಾಲದ ಅಭಿವೃದ್ಧಿಯ ವೈಭವ ಜಿಲ್ಲೆಯಲ್ಲಿ ಮರುಕಳಿಸಬೇಕು ಎಂದರು.


ಮೈಸೂರು ನಂಬರ್ ಒನ್ ಮಾಡಿ:


ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ 1 ಸ್ಥಾನಕ್ಕೆ ಕರೆದೊಯ್ಯಿರಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಗುರಿ ನೀಡಿದರು.
ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಲ್ಲಿ ಮೈಸೂರು ನಂಬರ್ 1 ಆಗಬೇಕು. ಇದು ನಿಮ್ಮಿಂದ ಸಾಧ್ಯವಿದೆ. ಸಾಧಿಸಿ ತೋರಿಸೋಣ ಎಂದು ಎಲ್ಲರ ಸಹಕಾರ ಕೋರಿದರು.


ಅಧಿಕಾರಿಗಳಿಗೆ ಅಭಿನಂದನೆ:


ಒಗ್ಗಟ್ಟಿನ ಶ್ರಮ ಮತ್ತು ಕೆಲಸಗಳ ಹಂಚಿಕೆ ಮೂಲಕ ಸಾರ್ವಜನಿಕರಿಂದ ಆಕ್ಷೇಪಣೆ ಇಲ್ಲದಂತೆ ದಸರಾ ಯಶಸ್ವಿಗೊಳಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಕ್ಷಮತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.


ಅಧಿಕಾರಿಗಳು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ. ಜನರ ನಡುವೆ ಇದ್ದರೆ ಅಧಿಕಾರಿಗಳ ಜನಪ್ರಿಯತೆಯೂ ಹೆಚ್ಚುತ್ತದೆ. ಜನರ ಸಮಸ್ಯೆಗಳೂ ಅರ್ಥ ಆಗುತ್ತವೆ. ಸಮಸ್ಯೆ ಅರ್ಥವಾದಷ್ಟೂ ಪರಿಣಾಮಕಾರಿ ಪರಿಹಾರ ಒದಗಿಸಲು ಸಾಧ್ಯ ಎಂದು ಸಲಹೆ ನೀಡಿದರು.
ದಸರಾ ಜನರ ಹಬ್ಬ. ಆದ್ದರಿಂದ ಜನರ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯ. ಅಂತೆಯೆ, ಈ ಬಾರಿ ಯಶಸ್ವಿಯಾಗಿದೆ. ಮುಂದಿನ ವರ್ಷ ಜನರ ಜತೆ ಪೂರ್ವಭಾವಿ ಸಭೆಗಳನ್ನು ನಡೆಸಿ ದಸರಾವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ಕರೆ ನೀಡಿದರು.


ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ದಸರಾದಲ್ಲಿ ಕಾಣಿಸಿದ ಒಗ್ಗಟ್ಟು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲೂ ಕಾಣಬೇಕು ಎಂದು ಸೂಚಿಸಿದರು.


ಕಾಂಗ್ರೆಸ್ ಮುಖಂಡ ಕೆ.ರೆಹಮಾನ್ ಖಾನ್, ಶಾಸಕರಾದ ಕೆ.ಹರೀಶ್‌ಗೌಡ, ಎಂಎಲ್‌ಸಿ ಡಿ.ತಿಮ್ಮಯ್ಯ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಎಸ್ಪಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ವಿ.ಗಾಯತ್ರಿ, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್ ಇನ್ನಿತರರಿದ್ದರು.