ಜಿಲ್ಲೆ

50 ಎಕರೆ ಭೂಮಿ ಹಿಂಪಡೆಯಲಿ

ಬಂಗಾರಪೇಟೆ: ಕೋಚಿಮುಲ್​ನ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್​ ಮುಖಂಡರಲ್ಲಿ ಆರಂಭವಾಗಿರುವ ಕಿತ್ತಾಟ ಮತ್ತೊಂದು ತಿರುವು ಪಡೆದುಕೊಂಡಿದೆ.

ಕೋಲಾರ ತಾಲೂಕು ಹುತ್ತೂರು ಹೋಬಳಿ ಹೊಳಲಿಯ ಸರ್ವೇ ನಂ.103ರಲ್ಲಿ ಕೋಚಿಮುಲ್​ಗೆ 2015ರಲ್ಲಿ ಆಗಿನ ಡಿಸಿ ಡಿ.ಕೆ.ರವಿ ನೀಡಿದ್ದ 50 ಎಕರೆ ಜಮೀನನ್ನು ರದ್ದುಪಡಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಶಾಸಕರು ಡಿ.20ರಂದು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಪತ್ರ ಬರೆದಿದ್ದು, ಸ.ನಂ 103ರಲ್ಲಿ ಕೋಮುಲ್​ನಿಂದ 18 ಕೋಟಿ ರೂ. ವೆಚ್ಚದಲ್ಲಿ ಸೋಲಾರ್​ ವಿದ್ಯುತ್​ ಉತ್ಪಾದನಾ ಟಕ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಗಮನಾರ್ಹ. ಆದರೆ, ಆಗಿನ ಜಿಲ್ಲಾಧಿಕಾರಿ ಅಧಿಕಾರ ಇಲ್ಲದಿದ್ದರೂ ಹೊಳಲಿಯಲ್ಲಿ 50 ಎಕರೆ ಭೂಮಿ ಅಕ್ರಮವಾಗಿ ಒಕ್ಕೂಟಕ್ಕೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸದರಿ ಭೂಮಿಯನ್ನು ಹಾಲು ಒಕ್ಕೂಟಕ್ಕೆ ಹಸಿರು ಮೇವು ಉತ್ಪಾದಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1984ರ ಕಲಂ 71ರ ಅಡಿ ಮಂಜೂರು ಮಾಡಿದ್ದಾರೆ. ಈ ಭೂಮಿಯನ್ನು ಮಂಜೂರಾದ ಮೂರು ವರ್ಷದೊಳಗೆ ರ್ನಿದಿಷ್ಟಪಡಿಸಿದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಷರತ್ತು ಮೀರಿದರೆ ಕಂದಾಯ ಇಲಾಖೆಯು ವಶಪಡಿಸಿಕೊಳ್ಳುವ ಅಧಿಕಾರ ಹೊಂದಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ವಾಸ್ತವವಾಗಿ ಜಿಲ್ಲಾಧಿಕಾರಿಗೆ 50 ಎಕರೆ ಭೂಮಿ ಮಂಜೂರು ಮಾಡುವ ಅಧಿಕಾರವೇ ಇಲ್ಲದಿದ್ದರೂ ಭೂಮಿ ನೀಡಿದ್ದಾರೆ ಎಂದು ಶಾಸಕರು ದೂರಿದ್ದಾರೆ.

ಸೋಲಾರ್​ ಟಕದ ಕಾಮಗಾರಿ ಸ್ಥಗಿತ ಮಾಡಿ: ನಿಯಮ ಮೀರಿ 50 ಎಕರೆ ಮಂಜೂರು ಮಾಡಿ ಮತ್ತು ಅಲ್ಲಿ ಇತರರ ಜಾಗ ಕಬಳಿಸಿ ಸೋಲಾರ ವಿದ್ಯುತ್​ ಟಕ ನಿರ್ಮಾಣ ಮಾಡುತ್ತಿರುವ ಕೋಚಿಮುಲ್​ ಹಾಗೂ ಅದಕ್ಕೆ ಸಹಕರಿಸಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ಸೋಲಾರ್​ ಟಕದ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಬೇಕು. ಆ ಜಾಗವನ್ನು ಬಡ ರೈತರಿಗೆ ಹಂಚಬೇಕು ಎಂದು ಶಾಸಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಸರ್ವೇ ನಂಬರ್​ನ 15ಯಲ್ಲಿ ಬಡವರಿಗೆ ಭೂಮಿ ಹಂಚಿಕೆ ಮಾಡಿ ನವಗ್ರಾಮ ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರೇಣುಕಾ ಯಲ್ಲಮ್ಮ ಬಳಗದ ಅನುಕೂಲಕ್ಕಾಗಿ 25 ಎಕರೆ ಭೂಮಿಯನ್ನು ದೇವಾಲಯ ಮತ್ತು ಸಮದಾಯ ಭವನಕ್ಕೆ ಮಂಜೂರು ಮಾಡಬೇಕು ಎಂದು ಎರಡು ವರ್ಷದ ಹಿಂದೆಯೇ ತಹಸೀಲ್ದಾರ್​ ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಮಂಜೂರಾದರೂ ಒಕ್ಕೂಟ ಬಳಕೆ ಮಾಡಿಲ್ಲ

ಜಮೀನು ಮಂಜೂರಾದ 8 ವರ್ಷವೂ ಭೂಮಿಯನ್ನು ಒಕ್ಕೂಟ ಬಳಕೆ ಮಾಡಿಲ್ಲ. 2023ರಲ್ಲಿ ಏಕಾಏಕಿ ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮುರಾರ್ಜಿ ಶಾಲೆಗೆ ಮಂಜೂರಾಗಿದ್ದ ಭೂಮಿಯನ್ನೂ ಸೇರಿಸಿ ಅಕ್ರಮ ಪ್ರವೇಶ ಮಾಡಿದೆ. ಇದಕ್ಕೂ ಮುನ್ನ ಕಂದಾಯ ಇಲಾಖೆಯ ಅನುಮತಿ ಪಡೆದಿಲ್ಲ. ಸರ್ವೇ ಟಿಪ್ಪಣಿ ಮತ್ತು ನೆ ಪಡೆದುಕೊಳ್ಳದೆ ಇತರರಿಗೆ ಮಂಜೂರಾಗಿದ್ದ ಭೂಮಿಯನ್ನು ಅತಿಕ್ರಮಿಸಿ ಬಡ ರೈತರು, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯನ್ನೂ ವಂಚಿಸಿ ಸೋಲಾರ್​ ಪ್ಯಾನಲ್​ ಅಳವಡಿಸಲಾಗುತ್ತಿದೆ ಎಂದು ಎಸ್​ಎನ್​ಆರ್​ ದೂರಿದ್ದಾರೆ.

ಕಾನೂನು ಬಾಹಿರ

ಹೊಳಲಿ ಗ್ರಾಮದ ಸ.ನಂ 103ರಲ್ಲಿ ಒಟ್ಟು 650 ಎಕರೆ ಭೂಮಿ ಇದ್ದು, ಇದೇ ಸ್ಥಳದಲ್ಲಿ ಅನೇಕ ರೈತರಿಗೆ, ಕ್ರಿಕೆಟ್​ ಸ್ಟೇಡಿಯಂಗೆ, ಸಮಾಜ ಕಲ್ಯಾಣ ಇಲಾಖೆಯ ಮುರಾರ್ಜಿ ವಸತಿ ಶಾಲೆ, ತೋಟಗಾರಿಕಾ ಇಲಾಖೆಗೆ ಭೂಮಿ ಮಂಜೂರು ಮಾಡಲಾಗಿದೆ. ಯಾರಿಗೂ 10 ಎಕರೆಗಿಂತ ಹೆಚ್ಚು ಭೂಮಿ ಮಂಜೂರು ಮಾಡಿಲ್ಲ. ಆದರೆ ಹಾಲು ಒಕ್ಕೂಟಕ್ಕೆ ಸರ್ಕಾರದ ಅನುಮತಿ ಪಡೆಯದೇ 50 ಎಕರೆ ನೀಡಿರುವುದು ಕಾನೂನು ಬಾಹಿರ ಎಂದು ಶಾಸಕರು ಆರೋಪಿಸಿದ್ದಾರೆ.