ಗುಳೇದಗುಡ್ಡ: ಚಿಕ್ಕ ದೇವಸ್ಥಾನದ ಶೆಡ್‌ನಲ್ಲಿಯೇ ಪಾಠ ಬೋಧನೆ. ಬರೆಯಲು ಕಪ್ಪು ಫಲಕ ಸಹ ಇಲ್ಲ. ಪೀಠೋಪಕರಣ ಕೇಳಲೇಬೇಡಿ. ಇರುವ ಇಬ್ಬರು ಶಿಕ್ಷಕರು ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ...!
ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಗ್ರಾಮದ ಪ್ಲಾಟ್‌ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. 2009ರಲ್ಲಿ ಪ್ರವಾಹ ಬಂದಾಗ ಇಲ್ಲಿ ಒಂದು ಶಾಲೆಯನ್ನು ತೆರೆಯಲು ನಿರ್ಧರಿಸಲಾಯಿತಾದರೂ ಕಟ್ಟಡ ನಿರ್ಮಾಣವಾಗಲಿಲ್ಲ. ತಾತ್ಕಾಲಿಕವಾಗಿ ಕೆಂಚಮ್ಮ ದೇವಿ ದೇವಸ್ಥಾನದ ಶೆಡ್‌ನಲ್ಲಿ ಶಾಲೆ ಆರಂಭವಾಯಿತು. 16 ವರ್ಷಗಳಿಂದ ಇದೇ ಶೆಡ್‌ನಲ್ಲಿ ಪಾಠಗಳು ನಡೆಯುತ್ತಿವೆ. ಈ ಶಾಲೆಗಾಗಿಯೇ ಗ್ರಾಮದ ಬಯೋಕಾನ್ ನಗರದಲ್ಲಿ ಒಂದು ಕೊಠಡಿಯನ್ನು ವರ್ಷದ ಹಿಂದೆ ನಿರ್ಮಿಸಲಾಗಿದೆ. ಅಲ್ಲಿ ಮೂಲ ಸೌಲಭ್ಯ ಇಲ್ಲದ್ದಕ್ಕೆ ಶಾಲೆ ಸ್ಥಳಂತರಗೊಂಡಿಲ್ಲ.
ಕೆಂಚಮ್ಮ ದೇವಸ್ಥಾನದ ತಗಡಿನ ಶೆಡ್‌ನಲ್ಲಿ ಪಾಠ ಕೇಳುವ ಮಕ್ಕಳ ಸ್ಥಿತಿ ಕೇಳುವವರಿಲ್ಲ. ಒಂದರಿಂದ ಐದನೇ ತರಗತಿಯ 30 ಮಕ್ಕಳಿಗೆ ಬಯಲೇ ಪಾಠಶಾಲೆ. ಗಾಳಿಯ ಹೊಡೆತ, ಬಿಸಿಲಿನ ತಾಪ, ಮಳೆಯ ಹನಿ ಎಲ್ಲವನ್ನೂ ಎದುರಿಸಿ ಪಾಠ ಕೇಳಬೇಕು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. 2009ರಿಂದ ಇದೇ ಸ್ಥಿತಿ ಇದೆ. ದೇವಸ್ಥಾನದ ದೈವದ ಮನೆಯಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ. ಅಲ್ಲಿಯೇ ಮುಖ್ಯ ಶಿಕ್ಷಕರ ಕಚೇರಿ ಇದೆ. ಈ ಕಟ್ಟಡವೂ ಸೋರುತ್ತಿದೆ.
ಮಕ್ಕಳಿಗೆ ಶೌಚಗೃಹದ ವ್ಯವಸ್ಥೆ ಇಲ್ಲ. ಆಟದ ಮೈದಾನವೂ ಇಲ್ಲ. ಸರ್ಕಾರ ಕನ್ನಡ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿದೆ. ಕನ್ನಡ ಶಾಲೆಗಳು ಉಳಿದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಲು ಸಾಧ್ಯ. ದುಸ್ಥಿತಿಯಲ್ಲಿರುವ ಮಂಗಳಗುಡ್ಡ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಸುಧಾರಣೆಗೆ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಗಮನ ಹರಿಸಬೇಕಿದೆ.
ಮಂಗಳಗುಡ್ಡ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಗ್ರಾಮದಲ್ಲಿ ನಿರ್ಮಿಸಲಾಗಿರುವ ಶಾಲೆಗೆ ಎಲ್ಲ ಮೂಲಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿಗೆ ಸೂಚಿಸುತ್ತೇನೆ. ಆದಷ್ಟು ಶೀಘ್ರದಲ್ಲಿ ಹೊಸ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಗುವುದು. ಬಿ.ಬಿ. ಚಿಮ್ಮನಕಟ್ಟಿ, ಶಾಸಕ ಗ್ರಾಮದ ಬಯೋಕಾನ್ ನಗರದಲ್ಲಿ ಈ ಶಾಲೆಗಾಗಿಯೇ ಒಂದು ಕೊಠಡಿ ನಿರ್ಮಿಸಲಾಗಿದೆ. ಆದರೆ ಅಲ್ಲಿ ಮೂಲ ಸೌಲಭ್ಯಗಳು ಇಲ್ಲದ್ದಕ್ಕೆ ಸ್ಥಳಾಂತರಿಸಿಲ್ಲ. ಮೂಲ ಸೌಲಭ್ಯ ಕಲ್ಪಿಸುವಂತೆ ಮೂರ‌್ನಾಲ್ಕು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆಯಾದರೂ ಅವರು ಇನ್ನೂ ಸೌಲಭ್ಯ ಕಲ್ಪಿಸಿಲ್ಲ ಸೋಮಪ್ಪ ಮಾದರ, ಎಸ್‌ಡಿಎಂಸಿ ಅಧ್ಯಕ್ಷ ಸಿಆರ್‌ಪಿ ಹಾಗೂ ಬಿಆರ್‌ಸಿ ಅವರನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಶಾಲಾ ಕಟ್ಟಡಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸುತ್ತೇನೆ. ಕೇಶವ ಪೆಟ್ಲೂರ, ಬಿಇಒ, ಬಾದಾಮಿ