ಜಿಲ್ಲೆ

ಬೀಳ್ತಿದೆ ಸೂಜಿಮಲ್ಲೇಶ್ವರ ಸರ್ಕಾರಿ ಶಾಲೆ

ಧನಂಜಯ ಎಸ್.ಹಕಾರಿ.

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ನಗರದ ಸೂಜಿಮಲ್ಲೇಶ್ವರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕೇಳುವ ಪರಿಸ್ಥಿತಿ ಬಂದೊದಗಿದೆ. ಇಷ್ಟಾದರೂ ಅಧಿಕಾರಿಗಳು ಇತ್ತ ಸುಳಿಯದೆ ಇರುವುದು ನಿಜಕ್ಕೂ ಬೇಸರ ತರಿಸಿದೆ.

ಶಾಲೆಯ ಕಟ್ಟಡಗಳ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಹೆಂಚುಗಳು ಚೂರಾಗಿದ್ದು, ಬಾಗಿಲು, ಕಿಟಕಿಗಳು ಕಿತ್ತು ಹೋಗಿವೆ. ಕೊಠಡಿಗಳಲ್ಲಿ ತರಗತಿ ನಡೆಸುವುದು ಕಷ್ಟವಾಗಿದೆ. 1 ರಿಂದ 5ನೇ ತರಗತಿ ವರೆಗೆ 50 ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ.

ಸ್ಥಳೀಯ ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಯನ್ನೆ ನೆಚ್ಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯಾಗಿರುವ ಕಾರಣದಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷೃವಹಿಸಿದ್ದಾರೆ.

ನೂತನ ಶಾಲಾ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ತ್ರಿಶಂಕು ಸ್ಥಿತಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ವ್ಯಾಸಂಗ ಮುಂದುವರೆದಿದೆ.

ಮೂಲ ಸೌಕರ್ಯವಿಲ್ಲ: ಅಪಾಯದ ಸ್ಥಿತಿಯಲ್ಲಿರುವ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಶಾಲೆ ಕುಸಿದು ಬೀಳುವ ಸ್ಥಿತಿಯಲ್ಲಿರುತ್ತದೆ.

ಇನ್ನು ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸರಿಯಾದ ಕೊಠಡಿ ಮತ್ತು ನೀರಿನ ವ್ಯವಸ್ಥೆ ಇಲ್ಲ. ಶೌಚಗೃಹದ ಸ್ಥಿತಿಯಂತೂ ಶೋಚನೀಯವಾಗಿದೆ. ವಿದ್ಯಾರ್ಥಿಗಳಿಗೆ ಬಯಲೇ ಆಸರೆಯಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಾಲಾ ಶಿಕ್ಷಕರು ಮತ್ತು ಶಾಲಾ ಸಮಿತಿಯವರು, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಬಡಮಕ್ಕಳು ಕಲಿಯುತ್ತಿರುವ ಶಾಲೆ ದುರಸ್ತಿ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನೂತನ ಶಾಲಾ ಕಟ್ಟಡಕ್ಕೆ ಮಂಜೂರಾತಿ ಆಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಅನುದಾನ ಬರುವವರೆಗೆ ಮಕ್ಕಳನ್ನು ಮರದ ಕೆಳಗೆ ಕೂರಿಸಿ ಪಾಠ ಮಾಡಲಾಗುತ್ತಿದೆ.ಜಯಣ್ಣ, ಸ್ಥಳೀಯ ಮುಖಂಡನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಅನುದಾನ ಬಂದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಈಗಾಗಲೇ ಒಂದು ಕೊಠಡಿ ರಿಪೇರಿ ಮಾಡಲಾಗಿದೆ. ಇನ್ನೊಂದು ಕೋಣೆ ದುರಸ್ತಿ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗುವುದು.ಕೆ.ಎಸ್.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ