ಶಿರ್ವ: ನಮ್ಮ ಪರಿಸರದಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಮನಸ್ಥಿತಿ ಇದೆ. ಕಾಡುಪ್ರಾಣಿಗಳ ಉಪಟಳ ಜಾಸ್ತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಕಡಿಮೆ ಶ್ರಮ ಮತ್ತು ಖರ್ಚಿನಲ್ಲಿ ಲಾಭದಾಯಕವಾಗಿ ಮಾಡಲು ಸಾಧ್ಯ ಎಂದು ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಹೇಳಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘ ಉಡುಪಿ ಪಾಂಬೂರು ಘಟಕದ ವತಿಯಿಂದ ಶಿರ್ವ ಸಮೀಪದ ಪಡುಬೆಳ್ಳೆ ಪಾಂಬೂರು ಕುರ್ಡಾಯಿ ಸ್ಯಾಮ್ಸ್ ಫಾರ್ಮ್‌ನಲ್ಲಿ ಶನಿವಾರ ವೈಜ್ಞಾನಿಕ ಭತ್ತದ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಸಾವಯವ ಕೃಷಿ, ದೇಶಿಯ ದನಗಳ ಸಾಕಣೆ ಮತ್ತು ಪ್ರಯೋಜನ, ಗೊಬ್ಬರದ ರಕ್ಷಣೆ, ಬೀಜಗಳ ಆಯ್ಕೆ, ಸಂರಕ್ಷಣೆ, ನಾಟಿ ಪದ್ಧತಿ, ಬಿತ್ತನೆ, ಯಂತ್ರೋಪಕರಣಗಳ ಬಳಕೆ, ನೈಸರ್ಗಿಕ ಕೀಟನಾಶಕಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೃಷಿಕ ಸಂಘದ ಸ್ಥಳೀಯ ಘಟಕ ಅಧ್ಯಕ್ಷ ಸ್ಯಾನ್ಸನ್ ನೊರೋನ್ಹಾ ಪಾಂಬೂರು ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ಪಾಂಬೂರು ರಿಚರ್ಡ್ ದಾಂತಿ, ಶಿರ್ವ ಗ್ರಾಪಂ ಮಾಜಿ ಉಪಾಧ್ಯಕ್ಷೆ ಗ್ರೇಸಿ ಕರ್ಡೊಜಾ, ಲೂಕಾಸ್ ಡಿಸೋಜ, ವಿಜಯ್ ಧೀರಜ್, ಲಕ್ಷ್ಮಣ ನಾಯಕ್, ನಿತ್ಯಾನಂದ ನಾಯಕ್ ಪಾಲಮೆ, ಪರಿಸರದ ಕೃಷಿಕರು ಪಾಲ್ಗೊಂಡಿದ್ದರು. ಪ್ರಗತಿಪರ ಕೃಷಿಕ ಗಂಗಾಧರ ಆಚಾರ್ಯ ದಿಂಡಿಬೆಟ್ಟು ಸ್ವಾಗತಿಸಿ, ರಮೇಶ್ಚಂದ್ರ ನಾಯಕ್ ಪಂಜಿಮಾರು ನಿರೂಪಿಸಿದರು.