ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರದಲ್ಲಿ ಕನಿಷ್ಟ ಸಂಖ್ಯೆಯ ಕುಷ್ಠರೋಗಿಗಳು ಪತ್ತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಶೂನ್ಯ ಸಂಖ್ಯೆಯ ಗುರಿಯೊಂದಿಗೆ ಕುಷ್ಠರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತ 18 ದಿನದ ವಿಶೇಷ ಆಂದೋಲಕ್ಕೆ ಚಾಲನೆ ನೀಡಲಿದೆ. ಮಾರಣಾಂತಿಕವಲ್ಲದಿದ್ದರೂ ನಿರ್ಲಕ್ಷಿಸಿದರೆ ಅಂಗವೈಕಲ್ಯ ಹಾಗೂ ಗಂಭೀರ ಅನಾರೋಗ್ಯದ ಹಂತ ತಲುಪುವಂತ ಈ ರೋಗವನ್ನು ಸಂಪೂರ್ಣ ನಿಯಂತ್ರಿಸುವುದು ಈ ಆಂದೋಲನದ ಧ್ಯೇಯೋದ್ದೇಶವಾಗಿದೆ.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಈ ಆಂದೋಲನಕ್ಕೆ ನ.4ರಿಂದ ಚಾಲನೆ ದೊರೆಯಲಿದ್ದು, 21ರವರೆಗೆ ಜಿಲ್ಲೆಯ 103 ಪಂಚಾಯಿತಿ ವ್ಯಾಪ್ತಿಯಲ್ಲೂ ಸ್ಕ್ರೀನಿಂಗ್ ನಡೆಯಲಿದೆ, ಮನೆಮನೆಗೆ ಭೇಟಿ ನೀಡಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದಂತೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ.
20 ಮಂದಿಯಲ್ಲಿ ರೋಗಲಕ್ಷಣ: ಪ್ರಸ್ತುತ ನಾಲ್ಕೂ ತಾಲೂಕುಗಳಲ್ಲೊಳಗೊಂಡ ಜಿಲ್ಲೆಯಲ್ಲಿ 11 ಮಂದಿಯಲ್ಲಿ ಕುಷ್ಠರೋಗ ಪತ್ತೆಯಾಗಿದೆ, ಹೊರ ಜಿಲ್ಲೆಗಳಿಂದ ಬಂದು ನೆಲೆಸಿರುವವರ ಪೈಕಿ 9 ಮಂದಿಯಲ್ಲಿ ಈ ರೋಗಲಕ್ಷಣ ಕಂಡುಬಂದಿದೆ. ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ಉಚಿತ ಚಿಕಿತ್ಸಾ ನೆರವು ಕಲ್ಪಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್‌ನಿಂದ ಹಿನ್ನೆಡೆ: ಜಿಲ್ಲೆಯಲ್ಲಿ ನಿರಂತರವಾಗಿ ಆರೋಗ್ಯ ಇಲಾಖೆಯಿಂದ ಕುಷ್ಠರೋಗಿಗಳ ಪತ್ತೆ ಹಾಗೂ ಚಿಕಿತ್ಸಾ ಕಾರ್ಯಕ್ರಮ ನಡೆಯುತ್ತಿರುತ್ತದೆ ಆದರೆ ಕೋವಿಡ್ ಕಾಲಘಟ್ಟದಲ್ಲಿ ಕುಷ್ಠರೋಗಿಗಳ ಪತ್ತೆ ಕಾರ್ಯಕ್ಕೆ ಸಾಕಷ್ಟು ಹಿನ್ನೆಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೋಗ ಪತ್ತೆ ಹಾಗೂ ಚಿಕಿತ್ಸಾ ಕಾರ್ಯಕ್ರಮ ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಆಂದೋಲನ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಲಕ್ಷ್ಯ ಕಾರಣ: ಸಾಮಾನ್ಯವಾಗಿ ಕುಷ್ಠರೋಗ ಲಕ್ಷಣ ಕಂಡುಬಂದರೂ ನಿರ್ಲಕ್ಷಿಸುವವರ ಸಂಖ್ಯೆ ಹೆಚ್ಚಿರುವುದರಿಂದ ರೋಗಿಗಳ ಪತ್ತೆ ಕಷ್ಟಸಾಧ್ಯವಾಗಿದೆ. ಪ್ರಾಥಮಿಕ ಹಂತದಲ್ಲೇ ರೋಗಲಕ್ಷಣ ಗುರುತಿಸಿದರೆ ಚಿಕಿತ್ಸೆ ಮೂಲಕ ಶೀಘ್ರ ಗುಣಮುಖರಾಗಬಹುದು. ಈ ರೋಗಿಗಳಲ್ಲಿ ಪ್ರಾಥಮಿಕ ಹಂತದಲ್ಲಿ ಯಾವುದೇ ನೋವು ಅಥವಾ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲವಾದ್ದರಿಂದ ಈ ಬಗ್ಗೆ ಜನ ಹೆಚ್ಚು ನಿಗಾವಹಿಸುವುದಿಲ್ಲ. ಆದರೆ ಇದನ್ನು ಹೀಗೆ ಬಿಟ್ಟರೆ ಭವಿಷ್ಯದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವ ಹಾಗೂ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ಮನೆಮನೆಗೆ ಭೇಟಿ ನೀಡಿ ಸ್ಕ್ರೀನಿಂಗ್ ಮಾಡುವ ಮೂಲಕ ರೋಗವನ್ನು ಸಂಪೂರ್ಣ ನಿಯಂತ್ರಿಸುವುದು ಈ ಆಂದೋಲನದ ಉದ್ದೇಶವಾಗಿದೆ.
ರೋಗ ಲಕ್ಷಣಗಳು:
ಚರ್ಮದ ಮೇಲಿನ ಯಾವುದೇ ತಿಳಿಬಿಳಿ ತಾಮ್ರ ಬಣ್ಣದ ಮಚ್ಚೆ, ದಪ್ಪನಾದ ಎಣ್ಣೆ ಸವರಿದಂತೆ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟುಗಳು, ಕಣ್ಣಿನ ರೆಪ್ಪೆ ಮುಚ್ಚುವಲ್ಲಿ ತೊಂದರೆ, ಕೈಕಾಲುಗಳಲ್ಲಿ ಬಹುದಿನಗಳ ಗಾಯ ಅಥವಾ ಬೆರಳು ಮಡಚಿದಂತಿರುವುದು, ನಡೆಯುವಾಗ ಕಾಲು ಎಳೆಯುವುದು, ಕೈಕಾಲುಗಳಲ್ಲಿ ಮರಗಟ್ಟುವಿಕೆ, ಅಂಗೈ, ಪಾದಗಳಲ್ಲಿ ಸಂವೇದನೆರಹಿತವಾಗಿರುವುದು, ಕೈಗಳಲ್ಲಿ ವಸ್ತು ಹಿಡಿಯಲು ಹಾಗೂ ಪಾದರಕ್ಷೆ ತೊಡಲು ಬಲಹೀತನೆ ಇವೆಲ್ಲ ಕುಷ್ಠರೋಗದ ಲಕ್ಷಣಗಳಾಗಿರಬಹುದು. ಇಂಥ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಕಾಣಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಕುಷ್ಠರೋಗ ಲಕ್ಷಣ ಕಂಡು ಬರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಅಭಿಯಾನ ನಡೆಯಲ್ಲಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಕುಷ್ಠರೋಗದ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ರೋಗಗಳ ಪತ್ತೆ ಹಚ್ಚಲು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು.
ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ
ಹುದುಗಿರುವ ರೋಗದ ಲಕ್ಷಣವನ್ನು ಪತ್ತೆ ಮಾಡಿ ಸೂಕ್ತಕಾಲದಲ್ಲಿ ಚಿಕಿತ್ಸೆ ದೊರಕಿಸಿಕೊಟ್ಟು ಕುಷ್ಠದಿಂದ ವ್ಯಕ್ತಿಯನ್ನು ಸಂಪೂರ್ಣವಾಗಿ ಗುಣಪಡಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಇದೊಂದು ಪಲ್ಸ್‌ಪೋಲಿಯೋ ಮಾದರಿಯ ಆಂದೋಲವಾಗಿದ್ದು ಜಿಲ್ಲಾದ್ಯಂತ ಅರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸ್ಕ್ರೀನಿಂಗ್ ಮಾಡಲಿದ್ದಾರೆ. ಇದಕ್ಕೆ ಬೇಕಾದ ಪ್ರಚಾರ ನೀಡಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ.
ಡಾ.ಶಾಂತಲಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ