ಜಿಲ್ಲೆ

ಕುಷ್ಠರೋಗ ಆಸ್ಪತ್ರೆಯ 79 ಹುದ್ದೆಗಳ ಸ್ಥಳಾಂತರ - ಆರೋಗ್ಯ ಇಲಾಖೆ ಆದೇಶ

ಪಂಕಜ ಕೆ.ಎಂ.

ಬೆಂಗಳೂರು: ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯ 83 ಹುದ್ದೆಗಳ ಪೈಕಿ 79 ಹುದ್ದೆಗಳನ್ನು ಇತರೆ ಆರೋಗ್ಯ ಸಂಸ್ಥೆಗಳಿಗೆ ಸ್ಥಳಾಂತರಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿರುವ ರೋಗಿಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಆಸ್ಪತ್ರೆಗೆ ಮಂಜೂರಾದ 83 ಹುದ್ದೆಗಳ ಪೈಕಿ ಪ್ರಸ್ತುತ 45 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಈ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕಾರ್ಯದ ಒತ್ತಡವಿಲ್ಲ. ಹೀಗಾಗಿ ಚರ್ಮರೋಗ ತಜ್ಞ, ಹಿರಿಯ ಫಾರ್ಮಸಿ ಅಧಿಕಾರಿ, ಫಿಸಿಯೋಥೆರಪಿಸ್ಟ್, ಕಿರಿಯ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ ಸೇರಿ ನಾಲ್ಕು ಮಂದಿ ಬಿಟ್ಟು ಉಳಿದಂತೆ ಮಂಜೂರಾಗಿದ್ದ 79 ಅನಗತ್ಯ ಹುದ್ದೆಗಳನ್ನೂ ಅಗತ್ಯವಿರುವ ಆರೋಗ್ಯ ಸಂಸ್ಥೆಗಳಿಗೆ ಸ್ಥಳಾಂತರ ಮಾಡಲು ಆದೇಶಿಸಲಾಗಿದೆ. ಹೀಗಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 45 ಮಂದಿ ಪೈಕಿ 41 ಮಂದಿ ಬೇರೆಡೆಗೆ ಸ್ಥಳಾಂತರಗೊಳ್ಳಲಿದ್ದಾರೆ.