ಜಿಲ್ಲೆ

ಜಿಲ್ಲೆಯಲ್ಲಿ 24 ಜನರಲ್ಲಿ ಕುಷ್ಠರೋಗ ಪತ್ತೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಸೆ.8 ರಿಂದ 24ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಪ್ರಸ್ತುತ 24 ಜನರಲ್ಲಿ ಕುಷ್ಠರೋಗ ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚಿದರೆ, ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದ್ದರಿಂದ ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ 100 ಹಳ್ಳಿಯಲ್ಲಿ ಕುಷ್ಠರೋಗ ಹೆಚ್ಚಾಗಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಇದಾಗಿದ್ದು, 40,529 ಮನೆಗಳಿಗೆ ಭೇಟಿ ನೀಡಿ 1.66 ಲಕ್ಷ ಜನರನ್ನು ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ದೇಶವನ್ನು ಕುಷ್ಠರೋಗ ಮುಕ್ತವಾಗಿಸಿ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ 290 ತಂಡ ರಚಿಸಲಾಗಿದ್ದು, ಇದರ ಉಸ್ತುವಾರಿ ನೋಡಿಕೊಳ್ಳಲು 14 ಜನರನ್ನು ನೇಮಕ ಗೊಳಿಸಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಜನರಿಗೆ ತಿಳಿಯಬೇಕು. ರೋಗದ ಕುರಿತು ಶಾಲಾ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.

ಕುಷ್ಠ ರೋಗದ ಕುರಿತು ಮೂಢನಂಬಿಕೆ ಬೇಡ. ಅಧಿಕಾರಿಗಳು ಕುಷ್ಠ ರೋಗದ ಕುರಿತು ಇರುವ ವೈಜ್ಞಾನಿಕ ಸಂಗತಿ ಹಾಗೂ ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸುವುದರ ಕುರಿತು ಸಾರ್ವಜನಿಕರಿಗೆ ತಿಳಿಸಿ. ಕುಷ್ಠ ರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಸಮಾಜ ಬೇರೆಯ ರೀತಿಯಲ್ಲಿ ನೋಡುತ್ತದೆ. ಆದ್ದರಿಂದ ಪ್ರೀತಿ ವಾತ್ಸಲ್ಯದಿಂದ ಕುಷ್ಠರೋಗಿಗಳನ್ನು ಕಾಣಬೇಕೆಂದು ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಮಾತನಾಡಿ, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ನಿರ್ಗತಿಕರಿಗೆ 25 ಜನರ ಸಾಮರ್ಥ್ಯದ ಆರೈಕೆ ಮತ್ತು ಚೇತರಿಕೆ ಕೇಂದ್ರ ಮಾಡಲು ಮಿಮ್ಸ್‌ನಲ್ಲಿ ಜಾಗ ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥರ ಆರೈಕೆ ಮಾಡಲು ಅರ್ಹ ಎನ್‌ಜಿಒ ಸಂಘ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ ಇತರರಿದ್ದರು.