ಜಿಲ್ಲೆ

ಜ.30ರಿಂದ ಕುಷ್ಠ ರೋಗ ಅರಿವು ಆಂದೋಲನ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಜ.30 ರಿಂದ ಫೆ.13ರವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಷ್ಠ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಆಂದೋಲನದ ಉದ್ದೇಶವಾಗಿದೆ ಎಂದರು.

ಶಿಕ್ಷಣ ಇಲಾಖೆ ಹಾಗೂ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ದೇಹದ ಮೇಲೆ ಸ್ಪರ್ಶ ಜ್ಞಾನ ವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ, ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿ. ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಕುಷ್ಠ ರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆದಲ್ಲಿ ಪೂರ್ಣವಾಗಿ ಗುಣಮುಖರಾಗಬಹುದು. ಈ ಬಗ್ಗೆ ಜ.30ರಂದು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನೊಳಗೊಂಡಂತೆ ಅರಿವು ಕಾರ್ಯಕ್ರಮ ಆಯೋಜಿಸಿ. ಆಂದೋಲನದ ಕಾರ್ಯಕ್ರಮದಲ್ಲಿ ಕರಪತ್ರ ವಿತರಣೆ, ಬೀದಿ ನಾಟಕದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ. ಶಾಲಾ, ಕಾಲೇಜು ಹಂತದಲ್ಲಿ ಕುಷ್ಠ ರೋಗದ ಕುರಿತು ಜಾಗೃತಿ ಮೂಡಿಸಲು ಆಶುಭಾಷಣ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಾ.ಕೆ.ಬೆಟ್ಟಸ್ವಾಮಿ, ಡಾ.ಕೆ.ಟಿ.ಅಶ್ವಥ್, ಡಾ.ಎಂ.ಎನ್‌ಆಶಾಲತಾ ಇತರರಿದ್ದರು.