ಜಿಲ್ಲೆ

ಕುಷ್ಠರೋಗ ನಿರ್ಮೂಲನೆಗೆ ಪಣ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ 2027ರ ವೇಳೆಗೆ ಸಂಪೂರ್ಣವಾಗಿ ಕುಷ್ಠರೋಗ ನಿರ್ಮೂಲನೆಗೆ ಪಣ ತೊಟ್ಟಿರುವ ಜಿಲ್ಲಾ ಆರೋಗ್ಯ ಇಲಾಖೆ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ (ಎಲ್‌ಸಿಡಿಸಿ) ಕಾರ್ಯಕ್ರಮದಡಿಯಲ್ಲಿ ರೋಗ ಪತ್ತೆ ಹಾಗೂ ಚಿಕಿತ್ಸೆಗೆ ಅವಿರತ ಶ್ರಮಿಸುತ್ತಿದೆ.

ಪ್ರಸ್ತುತ ಜಿಲ್ಲೆಯಲ್ಲಿ 18 ಮಂದಿ ಕುಷ್ಠರೋಗ ಬಾಧಿತರಿದ್ದರು ಎಲ್ಲರಿಗೂ ಆರೋಗ್ಯ ಇಲಾಖೆ ವತಿಯಿಂದ ಚಿಕಿತ್ಸೆ ದೊರಕಿಸಿಕೊಡಲಾಗಿದೆ, ಸೂಕ್ತ ಚಿಕಿತ್ಸೆಯಿಂದಾಗಿ ಈ ರೋಗದ ತೀವ್ರತೆಯಿಂದ ಇದರಲ್ಲಿ ಯಾರೊಬ್ಬರೂ ವಿಕಲಚೇತನರಾಗಿಲ್ಲ ಒಂದು ವೇಳೆ ದೇಹ ರಚನೆಯಲ್ಲಿ ನ್ಯೂನತೆ ಕಂಡುಬಂದರೆ ಅದನ್ನು ಸರಿಪಡಿಸಲು ಅಗತ್ಯ ಶಸಚಿಕಿತ್ಸೆಗೂ ಇಲಾಖೆ ಸಿದ್ದವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪತ್ತೆಯಾಗಿರುವ 18 ಪ್ರಕರಣಗಳ ಪೈಕಿ 17 ಎಂಬಿ (ಮಲ್ಟಿ ಬ್ಯಾಚಲೆರಿ) ಮತ್ತು 1 ಪಿಬಿ (ಪಾಸಿ ಬ್ಯಾಚಲೆರಿ) ಎಂದು ಗುರುತಿಸಲಾಗಿದೆ. ಎಲ್‌ಸಿಡಿಸಿ ಕಾರ್ಯಕ್ರಮದಡಿ 14 ದಿನಗಳ ಕಾಲ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಭೇಟಿ ಮಾಡಿ ರೋಗಿಗಳನ್ನು ಪತ್ತೆ ಮಾಡುವ ಕೆಲಸ ಮಾಡುತ್ತಿದ್ದಾರೆ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಠರೋಗದ ಲಕ್ಷಣಗಳು: ಚರ್ಮದ ಮೇಲೆ ಮಂದ, ಕೆಂಪು ಮತ್ತು ಸೂಕ್ಷ್ಮವಲ್ಲದ ತೇಪೆಗಳು, ದಪ್ಪ ಹೊಳೆಯುವ ಚರ್ಮ, ಕೈಕಾಲುಗಳಲ್ಲಿ ಮರಗಟ್ಟುವಿಕೆ, ದೌರ್ಬಲ್ಯ, ವಿರೂಪಗಳು, ನಿರಂತರ ಹುಣ್ಣುಗಳು, ಕೆಂಪು, ಊದಿಕೊಂಡ ಕಿವಿಗಳು, ಊದಿಕೊಂಡ ನರಗಳು, ಶಾಖ, ಶೀತ ಅಥವಾ ಒತ್ತಡವನ್ನು ಗ್ರಹಿಸಲು ಅಸಮರ್ಥತೆ ಮತ್ತು ಕಾಲುಗಳಲ್ಲಿ ಕೂದಲು ಉದುರುವಿಕೆ ಮುಂತಾದ ಲಕ್ಷಣಗಳು ಕುಷ್ಠರೋಗವಾಗಿರಬಹುದು. ರೋಗಾಣುಗಳು ದೇಹವನ್ನು ಪ್ರವೇಶಿಸಿದ ಆರಂಭದಲ್ಲಿ ತಕ್ಷಣ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಮೂರರಿಂದ ಐದು ವರ್ಷಗಳ ಬಳಿಕ ಲಕ್ಷಣಗಳು ಕಂಡುಬರುತ್ತವೆ, ಆರಂಭಿಕ ಚಿಕಿತ್ಸೆ ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟಬಹುದು ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಿಸಬಹುದು. ಈ ರೋಗವನ್ನು 6 ರಿಂದ 12 ತಿಂಗಳವರೆಗೆ ಹಲವು ಚಿಕಿತ್ಸಾ ವಿಧಾನಗಳಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಎಂಬುದು ಅಧಿಕಾರಿಗಳ ಭರವಸೆಯಾಗಿದೆ.

ಜಾಗೃತಿ ಕಾರ್ಯಕ್ರಮಗಳು: ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಇಲಾಖೆ ಸೂಚನೆಯಂತೆ 2027ರ ವೇಳೆಗೆ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂಬ ಗುರಿ ನೀಡಲಾಗಿದೆ, ಪ್ರಸ್ತುತ ಜಿಲ್ಲೆಯಲ್ಲಿ 18 ಪ್ರಕರಣಗಳು ಇದ್ದು, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸೆ ಮತ್ತು ಹೊಸ ಪ್ರಕರಣ ಪತ್ತೆ ಸೇರಿ ಸಾರ್ವಜನಿಕರಲ್ಲಿ ಅಭಿಯಾನದ ಮೂಲಕ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಕುಷ್ಠ ನಿರ್ಮೂಲನೆಗೆ ಬೀದಿ ನಾಟಕಗಳು ಕರಪತ್ರ ವಿತರಣೆ, ಪೋಸ್ಟರ್ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ ಇಲಾಖೆ ಕಾರ್ಯಕ್ರಮದೊಂದಿಗೆ ಜನರೂ ಯಾವುದಾದರೂ ರೋಗ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

--------

ಕುಷ್ಠ ರೋಗ ಪ್ರಕರಣ

ದೇವನಹಳ್ಳಿ 05

ದೊಡ್ಡಬಳ್ಳಾಪುರ 05

ಹೊಸಕೋಟೆ 06

ನೆಲಮಂಗಲ 02

ಒಟ್ಟು 18

-------

ಪ್ರಾರಂಭದಲ್ಲೇ ಕುಷ್ಟ ರೋಗಕ್ಕೆ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು, 2027ರ ವೇಳೆಗೆ ಕುಷ್ಟರೋಗ ನಿರ್ಮೂಲನೆ ಗುರಿಯೊಂದಿಗೆ ಆರೋಗ್ಯ ಇಲಾಖೆ ಎಲ್ಲ ಕಡೆಗಳಲ್ಲಿ ಈ ರೋಗದ ಬಗ್ಗೆ ಸಾಕಷ್ಟು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ

---------

ಕುಷ್ಠರೋಗ ನಿರ್ಮೂಲನೆಗೆ ವಿಶೇಷ ಅಭಿಯಾನದ ಮೂಲಕ ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ, ಗ್ರಾಪಂ ಮಟ್ಟದಿಂದಲೂ ಆಶಾ ಹಾಗೂ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ 24 ಪ್ರಕರಣಗಳು ಸಕ್ರಿಯವಾಗಿದ್ದವು, ಪ್ರಸ್ತುತ 18 ಪ್ರಕರಣಗಳಿದ್ದು ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರಕಿಸಿಕೊಡಲಾಗಿದೆ.

ಡಾ. ನಾಗರಾಜ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಕಾರಿ