ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮಾದಮಂಗಲ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದರ ಜತೆಗೆ ಜಿಂಕೆಯನ್ನು ಭೇಟೆಯಾಡಿ ಕೊಂದು ಹಾಕಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿದ್ದು ಜಮೀನುಗಳ ನಡುವೆ ಹಾದು ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ವ್ಯನ್ಯ ಮೃಗದ ಹೆಜ್ಜೆಯ ಗುರುತುಗಳು ಕಾಣಿಸಿಕೊಂಡಿವೆ. ಇದರಿಂದ ಜನರನ್ನು ಬಲಿ ತೆಗೆದುಕೊಳ್ಳುವುದಕ್ಕೆ ಮೊದಲು ಚಿರತೆಯನ್ನು ಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಇದರ ನಡುವೆ ಚಿರತೆಯು ಜಿಂಕೆಯನ್ನು ಭೇಟೆಯಾಡಿ, ಕೊಂದು ಹಾಕಿರುವ ಘಟನೆ ನಡೆದಿದೆ.
ಜಮೀನುಗಳ ಬಳಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾದಾಗಿನಿಂದಲೂ ಸ್ಥಳೀಯರು ಓಡಾಡಲು ಭಯ ಬೀಳುತ್ತಿದ್ದಾರೆ. ಕುರಿ ಕಾಯುವವರು, ತೋಟದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಆತಂಕ ಇದೆ. ಇನ್ನೂ ಚಿರತೆಯ ಓಡಾಡುತ್ತಿರುವ ಬಗ್ಗೆ ಗಮನಕ್ಕೆ ತಂದಾಗ ಸ್ಥಳಕ್ಕೆ ಬಂದು ಪರಿಶೀಲಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮತ್ತೊಂದೆಡೆ ಜಿಂಕೆಯನ್ನು ಯಾವುದೋ ಪ್ರಾಣಿ ತಿಂದು ಹಾಕಿರುವುದು ನಿಜ. ಸಮೀಪದ ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತಿನ ಮಾದರಿ ಇರುವುದರಿಂದ ಸತ್ತಿರುವ ಜಿಂಕೆಯನ್ನು ಸ್ಥಳಾಂತರಿಸಿಲ್ಲ. ಹಾಗೆಯೇ ಅಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಇಲಾಖೆಯ ಸಿಬ್ಬಂದಿ ಕಣ್ಗಾವಲು ಇದ್ದು ಚಿರತೆಯ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಲ್ಲಿ ಬೋನ್ ಸಹ ಅಳವಡಿಸಲಾಗುವುದು ಎಂದು ಸಹಾಯಕ ಅರಣ್ಯಾಧಿಕಾರಿ ಸೋಮನಾಥ್ ತಿಳಿಸಿದ್ದಾರೆ.