ಗಂಗಾವತಿ: ತಾಲೂಕಿನ ವೆಂಕಟಗಿರಿಯ ಬೆಟ್ಟದ ಪ್ರದೇಶದಲ್ಲಿ ಕೃಷಿ ಕೂಲಿಕಾರ್ಮಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಶನಿವಾರ ಬಿದ್ದಿದೆ. ಅಂದಾಜು ಒಂದೂವರೆ ವರ್ಷದ ಹೆಣ್ಣು ಚಿರತೆಯಾಗಿದ್ದು ಆರೋಗ್ಯವಾಗಿದೆ.
ಚಿರತೆಕಾಣಿಸಿಕೊಳ್ಳುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದು, ಕೆಲದಿನಗಳ ಹಿಂದೆ ಬೋನು ಇಡಲಾಗಿತ್ತು. ಬೆಳಗಿನ ಜಾವ ಬೋನಿಗೆ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಖಚಿತಪಡಿಸಿದ್ದು, ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.
ಮೇಲಾಧಿಕಾರಿಗಳ ಸೂಚನೆಯಂತೆ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸಲಾಗುತ್ತಿದ್ದು, ಸುರಕ್ಷಿತವಾಗಿ ನೋಡಿಕೊಳ್ಳಲಾಗುವುದು ಎಂದು ತಾಲೂಕು ಅರಣ್ಯ ಸಂರಕ್ಷಕ ಸುಭಾಶಚಂದ್ರ ನಾಯಕ ತಿಳಿಸಿದ್ದಾರೆ. ವೆಂಕಟಗಿರಿ, ಆನೆಗೊಂದಿ ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಕೆಲವೊಮ್ಮೆ ಸಿದ್ದಿಕೇರಿ ಮೂಲಕ ಗಂಗಾವತಿ ನಗರ ಪ್ರದೇಶಕ್ಕೂ ಬರುತ್ತಿವೆ. ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿದ್ದು, ಬೆಟ್ಟ ಪ್ರದೇಶದಲ್ಲಿ ನಿಗಾವಹಿಸಿದೆ.