ಜಿಲ್ಲೆ

ಕರಿಯಮ್ಮನ ಕೊಂದ ಜಾಗದಲ್ಲೇ ಚಿರತೆ ಪ್ರತ್ಯಕ್ಷ!

ಬೆಂಗಳೂರು ಗ್ರಾಮಾಂತರ ಡೆಸ್ಕ್

ಕಂಬಾಳು ಗೊಲ್ಲರಹಟ್ಟಿ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ | ಬಂಡೆ ಮೇಲಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆ

 ದಾಬಸ್‌ಪೇಟೆ : ನೆಲಮಂಗಲ ತಾಲೂಕು ಶಿವಗಂಗೆ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕಂಬಾಳು ಗೊಲ್ಲರಹಟ್ಟಿಯಲ್ಲಿ ನ.18ರಂದು ಕರಿಯಮ್ಮ ಎಂಬುವವರನ್ನು ಕೊಂದು ತಿಂದಿದ್ದ ಜಾಗದಲ್ಲಿಯೇ ಭಾನುವಾರ ಸಂಜೆ 5ಗಂಟೆ ಸುಮಾರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಕರಿಯಮ್ಮ ಹಸುಗಳಿಗೆ ಮೇವು ತರಲು ಹೋದಾಗ ದಾಳಿ ಮಾಡಿ ಕೊಂದಿದ್ದ ಚಿರತೆ, ನಂತರ ಜನರು ಇರುವಾಗಲೇ ಪುನಃ ದೇಹ ಎಳೆದುಕೊಂಡು ಹೋಗಿ ತಲೆ ಬುರುಡೆ ಕಿತ್ತು ತಿಂದಿತ್ತು.

ಈ ದಾಳಿಯು ಕಂಬಾಳು ಗೊಲ್ಲರಹಟ್ಟಿ ಜನರ ನಿದ್ದೆಗೆಡಿಸಿದ್ದು, ವಾರದ ನಂತರ ಬಹುತೇಕ ಅದೇ ಜಾಗದಲ್ಲಿ ಕಾಣಿಸಿಕೊಂಡಿರುವುದು ಭೀತಿ ಹೆಚ್ಚಿಸಿದೆ.

ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು 8 ಚಿಕ್ಕ ಬೋನು ಹಾಗೂ ತುಮಕೂರಿನಿಂದ ಒಂದು ವಿಶೇಷ ಬೋನನ್ನು ಚಿರತೆ ಸುಳಿದಾಡುವ ಜಾಗಗಳಲ್ಲಿ ಇಟ್ಟಿದೆ. ಆದರೆ ಬೋನಿಗೆ ಬೀಳದ ಚಿರತೆ ಬಂಡೆಯ ಮೇಲೆ ಕಾಣಿಸಿಕೊಂಡಿದ್ದು, ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಕರಿಯಮ್ಮ ಅವರನ್ನು ಕೊಂದ ಚಿರತೆ ಇದೇ ಇರಬಹುದು. ಏಕೆಂದರೆ ಕೊಂದು ಎಳೆದುಕೊಂಡು ಹೋದ ನೂರು ಮೀಟರ್ ದೂರದಲ್ಲಿಯೇ ಕಾಣಿಸಿಕೊಂಡಿರುವುದರಿಂದ ಅನುಮಾನ ಮೂಡಿಸಿದೆ.

ಹಗಲು-ರಾತ್ರಿ ಕಾರ್ಯಾಚರಣೆ

ಕರಿಯಮ್ಮ ಬಲಿಯಾದ ನಂತರದ ದಿನದಿಂದಲೂ ಸುಮಾರು 40-50 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯುವುದಕ್ಕಾಗಿ ಹಗಲು-ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳೂ ಸ್ಥಳದಲ್ಲೇ ಇದ್ದು, ಕಾರ್ಯಯೋಜನೆ ರೂಪಿಸುತ್ತಿದ್ದಾರೆ. ಈ ನಡುವೆ ಚಿರತೆ ಕಾಣಿಸಿಕೊಂಡಿರುವುದು ಎಲ್ಲರನ್ನೂ ಹೌಹಾರುವಂತೆ ಮಾಡಿದೆ.

ಮತ್ತೆ ಬೇಟೆಗೆ ಬಂತೆ?

ಕರಿಯಮ್ಮ ಅವರನ್ನು ಕೊಂದ ಚಿರತೆ ಇದೇ ಇರಬಹುದು. ಮತ್ತೆ ಅದು ಬೇಟೆಗೆ ಬಂದಂತಿದೆ. ಅದಕ್ಕೆ ಸುಮಾರು ಎಂಟತ್ತು ವರ್ಷಗಳ ವಯಸ್ಸಾಗಿರಬಹುದು. ಗಲಾಟೆ ಮಾಡದೆ ಚಿರತೆ ಬೋನಿಗೆ ಬೀಳುವಂತೆ ಮಾಡಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಸಿಬ್ಬಂದಿ ತಿಳಿಸಿದರು.