ಜಿಲ್ಲೆ

ಬೇಟೆಕೇರಿಯಲ್ಲಿ ಚಿರತೆ ಭಯ

ವಿವೇಕಾನಂದ ದಾಸನಕೊಪ್ಪ

ಕುಮಟಾ: ತಾಲೂಕಿನ ದೇವಗಿರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಮೇಯಲು ಹೋದ ಹಸು, ಕರು ಮಾತ್ರವಲ್ಲದೇ ಮನೆಯಲ್ಲಿ ಸಾಕಿದ ನಾಯಿಯನ್ನೂ ಬಿಡದೇ ಹೊತ್ತೊಯ್ಯುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ದೇವಗಿರಿಯ ಹೊರಭಾಗದ ಬೇಟೇಕೇರಿ ಭಾಗದಲ್ಲಿ ಕೆಲ ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು ಹಲವು ಹಸು ಕರುಗಳನ್ನು ಕೊಂದಿದೆ. ಹೀಗಾಗಿ ಜನರ ದೂರಿನ ಮೇರೆಗೆ ಅರಣ್ಯ ಇಲಾಖೆ ಪಂಜರ ಅಳವಡಿಸಿದರೂ ಪ್ರಯೋಜನವಾಗಿಲ್ಲ. ಬುಧವಾರ ಬೆಳಗಿನ ಜಾವ ಬೇಟೆಕೇರಿಯ ಕೃಷ್ಣ ನಾಗಪ್ಪ ಪಟಗಾರರ ಮನೆಗೆ ಬಂದು ಸಾಕಿದ ನಾಯಿಯನ್ನು ಸನಿಹದ ತೋಟಕ್ಕೆ ಹೊತ್ತೊಯ್ದು ತಿಂದು ಹಾಕಿದೆ. ಬೆಳಗ್ಗೆ ನಾಯಿಯ ಕಳೇಬರ ಕಂಡುಬಂದಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮತ್ತೆ ಚಿರತೆ ಹಿಡಿಯುವ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಬೋನಿಗೆ ಚಿರತೆ ಬೀಳದಿರುವುದರಿಂದ ಪರ್ಯಾಯ ಉಪಾಯಗಳತ್ತ ಅರಣ್ಯ ಇಲಾಖೆ ಹೆಜ್ಜೆಯಿಡಬೇಕಿದೆ. ಒಟ್ಟಾರೆ ದೇವಗಿರಿಯ ಹೊರಭಾಗದ ಬೇಟೆಕೇರಿ ಸುತ್ತಮುತ್ತಲ ಜನವಸತಿ ಪ್ರದೇಶಗಳಲ್ಲಿ ಚಿರತೆಯ ಹಾವಳಿಗೆ ಶೀಘ್ರ ಕಡಿವಾಣ ಹಾಕಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.