ಜಿಲ್ಲೆ

ಮುಳ್ಳೇರಿಯದಲ್ಲಿ ಮತ್ತೆ ಚಿರತೆ ಭೀತಿ

ಕಾಸರಗೋಡು: ಚಿರತೆ ಸಂಚಾರದ ಬಗ್ಗೆ ಭೀತಿ ಎದುರಿಸುತ್ತಿರುವ ಮುಳ್ಳೇರಿಯ ಆಸುಪಾಸಿನ ಜನತೆಗೆ ಅರ್ಧ ತಿಂದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮುಳ್ಳುಹಂದಿಯ ಕಳೇಬರದಿಂದ ಮತ್ತಷ್ಟು ಆತಂಕ ಉಂಟಾಗಿದೆ.

ಮುಳ್ಳೇರಿಯ ಸನಿಹದ ಅಡ್ಕತ್ತೊಟ್ಟಿ ನಿವಾಸಿ ಶಶಿಧರನ್​ ಎಂಬುವರ ಮನೆ ಸನಿಹ ಚಿರತೆ ಮುಳ್ಳುಹಂದಿಯನ್ನು ಬೇಟೆಯಾಡಿ ಅರ್ಧ ತಿಂದು ಹಾಕಿರುವ ಬಗ್ಗೆ ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇಲ್ಲಿನ ನಿವಾಸಿಯೊಬ್ಬರ ಸಾಕುನಾಯಿಯನ್ನೂ ಚಿರತೆ ಎಳೆದುಕೊಂಡು ಹೋಗಿರುವ ಟನೆ ಹಸಿರಾಗಿರುವಾಗಲೇ ಮುಳ್ಳುಹಂದಿಯ ಕಳೇಬರ ಪತ್ತೆಯಾಗಿದೆ.

ಚಿರತೆ ಸೆರೆಹಿಡಿಯಲು ಅಡ್ಕತೊಟ್ಟಿಯಲ್ಲಿ ಬೋನು ಇಡಲಾಗಿದ್ದು, ಇಲ್ಲಿಂದ 20 ಮೀಟರ್​ ದೂರದಲ್ಲಿ ಮುಳ್ಳುಹಂದಿ ಕಳೇಬರ ಪತ್ತೆಯಾಗಿದೆ. ಆದರೆ ಚಿರತೆ ಬೋನಿನ ಬಳಿ ಸುಳಿಯದಿರುವುದು ಸ್ಥಳಿಯ ಜನತೆಗೆ ಹಾಗೂ ವನಪಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಹಂದಿ ಕಳೇಬರ ಪತ್ತೆಯಾದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದರು.