ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣ ಸಮೀಪದಲ್ಲೇ ಚಿರತೆ ಪ್ರತ್ಯಕ್ಷ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತ್ಯಂತ ಸನಿಹದಲ್ಲೇ ಶುಕ್ರವಾರ ಮುಂಜಾನೆ ಬೆಳಕು ಹರಿಯುವ ಮೊದಲು ಸುಮಾರು ನಾಲ್ಕು ಗಂಟೆಗೆ ಚಿರತೆ ಪ್ರತ್ಯಕ್ಷವಾಗಿದೆ.

ಸಮೀಪದ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಮಾನ ನಿಲ್ದಾಣದ ಓರ್ವ ಅಧಿಕಾರಿ ತನ ವಾಹನದ ಒಳಗಿನಿಂದಲೇ ರಸ್ತೆ ದಾಟುತ್ತಿದ್ದ ಚಿರತೆಯ ಫೋಟೋ ಮತ್ತು ವೀಡಿಯೋ ಚಿತ್ರಿಸಿಕೊಂಡಿದ್ದಾರೆ.

ವಿಮಾಣ ನಿಲ್ದಾಣದಿಂದ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಅಧಿಕಾರಿಗಳು ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳ ಕಣ್ಣಿಗೆ ಚಿರತೆ ಬಿದ್ದಿಲ್ಲ.

ವಿಮಾನ ನಿಲ್ದಾಣದ ಪ್ರಯಾಣಿಕರು ಹಾಗೂ ಹತ್ತಿರದ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಪರಿಸರದಲ್ಲಿ ಅಡ್ಡಾಡುವ ಚಿರತೆಯನ್ನು ಹಿಡಿಯುವ ಸಲುವಾಗಿ ಶುಕ್ರವಾರ ವಿಮಾನ ನಿಲ್ದಾಣ ಆಸುಪಾಸಿನಲ್ಲಿ ನಾಲ್ಕು ಕೆಜಿ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಮೂರು ಕೆಜಿಗಳನ್ನು ವಿಮಾನ ನಿಲ್ದಾಣದವರೇ ಪೂರೈಸಿದ್ದಾರೆ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ‘ವಿಜಯವಾಣಿ’ ತಿಳಿಸಿದ್ದಾರೆ.

ಶುಕ್ರವಾರದಿಂದಲೇ ಓರ್ವ ಅರಣ್ಯ ಇಲಾಖೆ ಸಿಬ್ಬಂದಿಯನ್ನು ವಿಮಾನ ನಿಲ್ದಾಣ ಸಮೀಪ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಅವರು ಅಗತ್ಯ ಕ್ರಮ ಕೈಗೊಳ್ಳುವರು ಎಂದು ಅವರು ಮಾಹಿತಿ ನೀಡಿದ್ದಾರೆ.