ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿಯ ಮುಡುಕುತೊರೆ ಗುಡ್ಡದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರು ಭಯಭೀತರಾಗಿದ್ದಾರೆ.
ಕೊಡಗಳ್ಳಿ, ಹೊನಗಹಳ್ಳಿ, ಜವನಗಹಳ್ಳಿ, ನಾರಾಯಣಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಗಿಂದಾಗ್ಗೆ ಕುರಿ, ಮೇಕೆ, ನಾಯಿಗಳನ್ನು ಚಿರತೆ ಎಳೆದೊಯ್ದು ತಿಂದು ಹಾಕುತ್ತಿದ್ದವು. ಆದರೆ ಕಳೆದ ರಾತ್ರಿ ದ್ಯಾವಪಟ್ಟಣ ಗ್ರಾಮದ ಹೊರ ವಲಯದ ರಸ್ತೆ ಬದಿಯಲ್ಲಿ ಚಿರತೆ ಹೋಗುತ್ತಿರುವುದನ್ನು ಬೈಕ್ ಸವಾರರು ಕಂಡು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ. ಇದರಿಂದ ಈ ಭಾಗದ ಜನತೆ ಆತಂಕಗೊಂಡಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ವೇಳೆ ಗಸ್ತು ನಡೆಸುವ ಮೂಲಕ ಜನ ಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.