ಗುತ್ತಲ: ಹೋಬಳಿಯ ಬಸನಕಟ್ಟಿ, ಯಲಗಚ್ಚ, ಹಳೇರಿತ್ತಿ, ಬಸಾಪುರ ಸರಹದ್ದಿನ ಜಮೀನುಗಳಲ್ಲಿ ಚಿರತೆ ಹಾಗೂ ಅದರ ಮರಿಯೊಂದು ಓಡಾಡುತ್ತಿವೆ ಎಂದು ವದಂತಿ ಹಬ್ಬಿದ್ದು, ರೈತರು ಆತಂಕಗೊಂಡಿದ್ದಾರೆ.
ನಾಲ್ಕೈದು ದಿನಗಳಿಂದ ಯಲಗಚ್ಚ, ಬಸನಕಟ್ಟಿ ಗ್ರಾಮಗಳ ಸರಹದ್ದಿನಲ್ಲಿ ಚಿರತೆ ಓಡಾಡುತ್ತಿದ್ದು, ನಾಯಿ ಮತ್ತು ಜಿಂಕೆ ಮರಿಯೊಂದನ್ನು ತಿಂದಿದೆ ಎಂಬ ಸುದ್ದಿ ಹಬ್ಬಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬಸನಕಟ್ಟಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದಾರೆ. ಇದು ಕತ್ತೆ ಕಿರುಬ ಪ್ರಾಣಿಯ ಹೆಜ್ಜೆ ಗುರುತು ಇರಬಹುದು ಎಂದು ಶಂಕಿಸಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಬಸನಕಟ್ಟಿ, ಯಲಗಚ್ಚ, ಹಳೇರಿತ್ತಿ, ಬಸಾಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ರೈತರು ತೆರಳದಂತೆ ಸೂಚನೆ ನೀಡಿದ್ದಾರೆ.
ಆರ್ಎಫ್ಒ ರಾಮಪ್ಪ ಪೂಜಾರ, ಡಿಆರ್ಎಫ್ಒ ಎ.ಎಸ್. ಹುಬ್ಬಳ್ಳಿ, ಅರಣ್ಯ ರಕ್ಷಕರಾದ ಎಂ. ಸಿ ಭಜಂತ್ರಿ, ಆರ್.ಎಂ. ಶೇಷಗಿರಿ, ರಾಮಚಂದ್ರ ಎ.ಎನ್, ಎಂ.ಎನ್. ಸೂರಣಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಸೋಮಕಟ್ಟಿ (ಶಿಬಾರ) ಬಸನಕಟ್ಟಿ, ಯಲಗಚ್ಚ, ಹಳೇರಿತ್ತಿ, ಬಸಾಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ.