ಬೇಲೂರು: ತಾಲೂಕಿನ ಶಂಭುಗನಹಳ್ಳಿ ಗ್ರಾಮದ ಸಮೀಪ ಚಿರತೆ ಹೆಜ್ಜೆ ಗುರುತುಗಳು ಶುಕ್ರವಾರ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಶೀಘ್ರ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ತಾಲೂಕಿನ ಶಂಭುಗನಹಳ್ಳಿ ಗ್ರಾಮ ಬೇಲೂರು ಪಟ್ಟಣದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು, ಶಂಭುಗನಹಳ್ಳಿ ಹಾಗೂ ಸೂರಾಪುರ ನಡುವಿನ ಯಗಚಿ ಹಿನ್ನೀರಿನ ಸಮೀಪ ತೋಟ, ಹೊಲ, ಗದ್ದೆಗಳಿವೆ. ಕೆಲ ಭಾಗದಲ್ಲಿ ಜಲಾಶಯಕ್ಕೆ ಸೇರಿದ ಪಾಳು ಬಿದ್ದಿರುವ ಜಾಗ ಸಹ ಇದ್ದು ಈ ಭಾಗದಲ್ಲಿ ಚಿರತೆ ಇರಬಹುದು ಎಂಬ ಶಂಕೆ ಗ್ರಾಮಸ್ಥರದ್ದು.
ಶಂಭುಗನಹಳ್ಳಿ ಗ್ರಾಮದ ಜಮೀನಿನ ಸಮೀಪ ಗುರುವಾರ ಸಂಜೆ ಚಿರತೆ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದರಿಂದ ಜನರು ಆತಂಕಕ್ಕೊಳಗಾಗಿ ಜಮೀನಿನಲ್ಲಿ ಕೆಲಸ, ಕಾರ್ಯಗಳಲ್ಲಿ ತೊಡಗಿದ್ದವರು ಕೆಲಸವನ್ನೆಲ್ಲ ಬಿಟ್ಟು ಮನೆಗೆ ವಾಪಸ್ ಬಂದಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲಿಸಿ ಹೆಜ್ಜೆ ಗುರುತುಗಳು ಚಿರತೆಯದ್ದೆ ಎಂದು ದೃಢಪಡಿಸಿದ್ದಾರೆ. ಇದು ಈ ಭಾಗದ ಸೂರಾಪುರ, ಶಂಭುಗನಹಳ್ಳಿ, ಬೊಮ್ಮಡಿಹಳ್ಳಿ, ದೊಡ್ಡಮೇದೂರು ಭಾಗದ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿರತೆಯನ್ನು ಬೇಗ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಯತೀಶ್ ಮಾತನಾಡಿ, ಚಿರತೆ ಓಡಾಡಿದ ಹೆಜ್ಜೆ ಗುರುತು ಕಂಡು ಬಂದಿದೆ. ಆದರೆ ಚಿರತೆ ಎಲ್ಲಿದೆ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಗ್ರಾಮಸ್ಥರು ಎಚ್ಚರ ವಹಿಸುವಂತೆ ತಿಳಿಸಿದ್ದೇವೆ. ಹಾಗೂ ಚಿರತೆ ಹಿಡಿಯಲು ಸದ್ಯದಲ್ಲೆ ಬೋನು ಇಡಲಾಗುವುದು ಎಂದರು.